ಬೆಂಗಳೂರು: ಸೆ.26, ಪೂಜೆ-ಪುನಸ್ಕಾರಗಳ ನೆರವೇರಿಸುವ ನೆಪದಲ್ಲಿ ಅರ್ಚಕನೇ ಚಿನ್ನಾಭರಣ ಕಳವು ಮಾಡಿದ್ದಾನೆ ಎಂಬ ಆರೋಪ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿ ನಡೆದಿದೆ. ಘಟನೆಯ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ಹಿನ್ನೆಲೆ
ದಂಪತಿಯ ಕುಟುಂಬದಲ್ಲಿ ಮಂಗಳಕರ ಕಾರ್ಯಕ್ರಮವೊಂದು ನಡೆಯಬೇಕಿದ್ದುದರಿಂದ, ಅದರ ಶುಭಾರಂಭವಾಗಿ ವರಮಹಾಲಕ್ಷ್ಮಿ ಮತ್ತು ಸತ್ಯನಾರಾಯಣ ಸ್ವಾಮಿಗಳ ಪೂಜೆಯನ್ನು ನಿಗದಿ ಪಡಿಸಲಾಗಿತ್ತು. ಈ ಸಂಬಂಧವಾಗಿ ಅವರು ದೇವಸ್ಥಾನದ ಅರ್ಚಕ ರಮೇಶ್ ಶಾಸ್ತ್ರಿಯವರನ್ನು ಸಂಪರ್ಕಿಸಿದರು. ಶಾಸ್ತ್ರಿಯವರು ಪೂಜೆಯ ವಿಧಿ-ವಿಧಾನಗಳು ಹಲವಾರು ದಿನಗಳವರೆಗೆ ನಡೆಯಬೇಕಾಗಿರುವ ಕಾರಣ, ಅವರ ಬಳಿ ಇರುವ ಸತ್ಯನಾರಾಯಣ ದೇವರ ವಿಗ್ರಹದ ಸಮೇತ ದಂಪತಿಯ ಮನೆಯಲ್ಲೇ ಉಳಿದುಕೊಂಡು ಪೂಜೆಗಳನ್ನು ನೆರವೇರಿಸಲು ಸೂಚಿಸಿದರಂತೆ. ಭಕ್ತಿಭಾವದಿಂದ ಕೂಡಿದ ದಂಪತಿ ಅರ್ಚಕರ ಈ ವಿನಂತಿಯನ್ನು ಒಪ್ಪಿಗೆಯಿತ್ತು ಮತ್ತು ತಮ್ಮ ಮನೆಯಲ್ಲಿಯೇ ಅವರ ವಾಸಕ್ಕೆ ಉತ್ತಮ ವ್ಯವಸ್ಥೆ ಮಾಡಿಕೊಟ್ಟರು.
ಪೂಜೆಯ ದಿನಗಳಲ್ಲಿ ಎಲ್ಲವೂ ಸಾಮಾನ್ಯವಾಗಿ ಕಂಡಿತು. ರಮೇಶ್ ಶಾಸ್ತ್ರಿಯವರು ಪೂಜಾ ವಿಧಿಗಳನ್ನು ನಿರ್ವಹಿಸುತ್ತಿದ್ದರು. ಪೂಜೆಗಾಗಿ ಬಳಸಲಾಗುತ್ತಿದ್ದ ಸತ್ಯನಾರಾಯಣ ದೇವರ ವಿಗ್ರಹವನ್ನು ಅಲಂಕರಿಸಲು ದಂಪತಿಯವರು ತಮ್ಮ ಸ್ವಂತದ 44 ಗ್ರಾಂ ಚಿನ್ನದ ನೆಕ್ಲೆಸ್ ಒಂದನ್ನು ಧರಿಸಿಸಿದ್ದರು. ಎಲ್ಲಾ ಪೂಜಾ ಕ್ರಿಯೆಗಳು ಮುಗಿದ ನಂತರ, ಮಾರನೆಯ ದಿನ ಸಂಜೆ ಶಾಸ್ತ್ರಿಯವರು ದೇವರ ವಿಗ್ರಹವನ್ನು ಎತ್ತಿಕೊಂಡು ಮನೆಯಿಂದ ಹೊರಟರು.
ಅರ್ಚಕರು ಹೊರಟ ನಂತರ, ದಂಪತಿಯವರು ಪೂಜೆಯಲ್ಲಿ ಬಳಸಿದ ವಸ್ತುಗಳನ್ನು ಜಾಗರೂಕತೆಯಿಂದ ಸಂಗ್ರಹಿಸುವ ಸಮಯದಲ್ಲಿ, ಸತ್ಯನಾರಾಯಣ ವಿಗ್ರಹದಿಂದ ಚಿನ್ನದ ನೆಕ್ಲೆಸ್ ನಾಪತ್ತೆಯಾಗಿದೆ ಎಂದು ಗಮನಿಸಿದರು. ಆಗ ಇಡೀ ಮನೆಯನ್ನು ಹುಡುಕಾಟ ನಡೆಸಿದರು. ಆದರೆ ಎಲ್ಲಿಯೂ ಸಿಗಲಿಲ್ಲ.
ನಂತರ ದಂಪತಿ ಅರ್ಚಕ ರಮೇಶ್ ಶಾಸ್ತ್ರಿಯವರನ್ನು ಸಂಪರ್ಕಿಸಿ ನೆಕ್ಲೆಸ್ ಕುರಿತು ವಿಚಾರಿಸಿದರು. ಆದರೆ, ಶಾಸ್ತ್ರಿಯವರು ತಮಗೆ ಚಿನ್ನಾಭರಣದ ಬಗ್ಗೆ ಏನೂ ಗೊತ್ತಿಲ್ಲ ಮತ್ತು ಅದು ಹೇಗೆ ಕಾಣೆಯಾಗಿದೆ ಎಂದು ತಿಳಿಯದು ಎಂದು ಹೇಳಿದರಂತೆ. ಅರ್ಚಕರ ಈ ಪ್ರತಿಕ್ರಿಯೆಯಿಂದ ಅವರ ಮೇಲೇ ಸಂಶಯ ಬೀಳತೊಡಗಿತು. ದಂಪತಿಯವರ ಪ್ರಕಾರ, ಪೂಜೆಯ ದಿನಗಳಲ್ಲಿ ಬೇರೆ ಯಾರೂ ಮನೆಗೆ ಬಂದುಹೋಗಿರಲಿಲ್ಲ ಮತ್ತು ಅರ್ಚಕರನ್ನು ಬಿಟ್ಟರೆ ಬೇರೆ ಯಾರಿಗೂ ಆ ವಿಗ್ರಹವನ್ನು ಸ್ಪರ್ಶಿಸುವ ಅವಕಾಶವಿರಲಿಲ್ಲ.
ಈ ಹಿನ್ನೆಲೆಯಲ್ಲಿ, ಅರ್ಚಕ ರಮೇಶ್ ಶಾಸ್ತ್ರಿಯವರೇ ಚಿನ್ನದ ನೆಕ್ಲೆಸ್ ಕಳವು ಮಾಡಿದ್ದಾರೆ ಎಂಬ ಆರೋಪದೊಂದಿದೆ ಅಶೋಕ್ ಚಂದರಗಿ ಮಾಗಡಿ ರೋಡ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.