ಬೆಂಗಳೂರು: ಬೆಂಗಳೂರಿನ ಕಾಡುಗೋಡಿಯ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರಾದ ತಂದೆ-ಮಗನನ್ನು ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಕೇಸ್‌ಗೆ ತೆರಳಿದ್ದ ವೇಳೆ, ಈ ದಾರುಣ ಘಟನೆ ನಡೆದಿದೆ.
ಮೃತರನ್ನು ಮಹದೇವಪುರದ ಬಿಜೆಪಿ ಯುವ ಮುಖಂಡ ಮತ್ತು ಉದ್ಯಮಿ ಪ್ರಶಾಂತ್ ರೆಡ್ಡಿ (38) ಹಾಗೂ ಅವರ ತಂದೆ ವೀರಸ್ವಾಮಿ ರೆಡ್ಡಿ (62) ಎಂದು ಗುರುತಿಸಲಾಗಿದೆ. ಈ ಜೋಡಿಯನ್ನು ಕಿಡ್ನ್ಯಾಪ್ ಮಾಡಿ, ಕತ್ತು ಸೀಳಿ, ಹೆದ್ದಾರಿಯ ಬಳಿ ಬೀಸಾಡಲಾಗಿದೆ.
ಈ ಘಟನೆ ಇಂದು ಬಾಪಟ್ಲ ಜಿಲ್ಲೆಯ ಕೋರ್ಟ್ ಸಮೀಪದಲ್ಲಿ ನಡೆದಿದೆ. ಪ್ರಶಾಂತ್ ರೆಡ್ಡಿ ಮತ್ತು ವೀರಸ್ವಾಮಿ ರೆಡ್ಡಿ ಇಬ್ಬರೂ ಬೆಂಗಳೂರಿನ ಕಾಡುಗೋಡಿಯ ನಿವಾಸಿಗಳಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು. ಬಿಜೆಪಿಯ ಸಕ್ರಿಯ ಸದಸ್ಯರಾಗಿ, ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದರು. ಇವರು ರಾಜಕೀಯ ಮತ್ತು ಉದ್ಯಮದ ಯಶಸ್ಸಿನಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
ಪ್ರಶಾಂತ್ ಮತ್ತು ವೀರಸ್ವಾಮಿ ರೆಡ್ಡಿಯವರು ಆಂಧ್ರ ಮೂಲದ ಇನ್ನೊಬ್ಬ ಉದ್ಯಮಿ ಮಾದವರೆಡ್ಡಿ ಮತ್ತು ಅವರ ಸಹಚರ ಅನಿಲ್ ರೆಡ್ಡಿ ವಿರುದ್ಧ ಬೆಂಗಳೂರಿನಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಪ್ರತಿಯಾಗಿ, ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿಯೂ ತಂದೆ-ಮಗನ ವಿರುದ್ಧ ಆಂಧ್ರದಲ್ಲಿ ಕೇಸು ದಾಖಲಿಸಿದ್ದರು. ಈ ಕೇಸ್‌ನ ವಿಚಾರಣೆಗಾಗಿ, ಪ್ರಶಾಂತ್ ಮತ್ತು ವೀರಸ್ವಾಮಿ ರೆಡ್ಡಿಯವರು ನಿನ್ನೆ ವಿಮಾನದ ಮೂಲಕ ಆಂಧ್ರ ಪ್ರದೇಶಕ್ಕೆ ತೆರಳಿದ್ದರು.
ಇಂದು ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಇವರು ಕೋರ್ಟ್ ಸಮೀಪದಲ್ಲಿದ್ದರು. ಆದರೆ, ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿಯವರು ರಾಜಿಯಾಗುವ ಚರ್ಚೆಗೆಂದು ತಂದೆ-ಮಗನನ್ನು ಕರೆದಿದ್ದರು. ಈ ವೇಳೆ, ಅವರನ್ನು ಸ್ಕಾರ್ಪಿಯೋ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಲಾಗಿದೆ. ನಂತರ ಇವರಿಬ್ಬರ ಕತ್ತು ಸೀಳಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಳಿಕ ಶವಗಳನ್ನು ಹೆದ್ದಾರಿಯ ಬಳಿ ಬೀಸಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಪಟ್ಲ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದು, ಆರೋಪಿಗಳಾದ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.