ಜ. 24ರಂದು ಹಾಸನದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ: 2 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ

Untitled design 2026 01 08T200534.303

ಹಾಸನ: ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ವತಿಯಿಂದ ಜನವರಿ 24ರಂದು ಹಾಸನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಮತ್ತು ಬೆಂಬಲಿಗರು ಭಾಗವಹಿಸುವ ನಿರೀಕ್ಷೆಯಿದೆ. ಈ ಕುರಿತು ಜೆಡಿಎಸ್ ಹಾಸನ ಜಿಲ್ಲಾ ಘಟಕದ ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಅವರು ಮಾಹಿತಿ ನೀಡಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಶಕ್ತಿಯನ್ನು ರಾಜ್ಯಮಟ್ಟದಲ್ಲಿ ಮತ್ತೊಮ್ಮೆ ಪ್ರದರ್ಶಿಸುವ ಉದ್ದೇಶದಿಂದ ಈ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಾವೇಶವು ಜನವರಿ 24ರಂದು ಮಧ್ಯಾಹ್ನ 1 ಗಂಟೆಗೆ ಹಾಸನದಲ್ಲಿ ನಡೆಯಲಿದ್ದು, ಮಾಜಿ ಸಚಿವ ಹಾಗೂ ಶಾಸಕರಾದ ಹೆಚ್.ಡಿ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಸಮಾವೇಶಕ್ಕೆ ಜೆಡಿಎಸ್ ಪಕ್ಷದ ವರಿಷ್ಠ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು ಹಾಗೂ ರಾಜ್ಯಮಟ್ಟದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ಲಿಂಗೇಶ್ ಹೇಳಿದರು.

ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಸಮಾವೇಶ ಯಶಸ್ವಿಯಾಗಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಲಾಗಿದೆ. ಈ ಸಭೆಗಳ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ, ಸಮಾವೇಶದ ಮಹತ್ವವನ್ನು ತಿಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನವರಿ 11ರಂದು ಬೆಳಿಗ್ಗೆ 10.30ಕ್ಕೆ ಬೇಲೂರು ತಾಲೂಕಿನಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಚನ್ನರಾಯಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಅದೇ ರೀತಿ, ಜನವರಿ 12ರಂದು ಬೆಳಿಗ್ಗೆ 10 ಗಂಟೆಗೆ ಹೊಳೆನರಸೀಪುರದಲ್ಲಿ ಹಾಗೂ ಮಧ್ಯಾಹ್ನ 2 ಗಂಟೆಗೆ ಸಕಲೇಶಪುರದಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. ಜನವರಿ 13ರಂದು ಬೆಳಿಗ್ಗೆ 10 ಗಂಟೆಗೆ ಆಲೂರು ತಾಲೂಕಿನಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ವಿವರಿಸಿದರು.

ಇನ್ನೂ ಜನವರಿ 17ರಂದು ಬೆಳಿಗ್ಗೆ 10 ಗಂಟೆಗೆ ಅರಕಲಗೂಡು ತಾಲೂಕಿನಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಅರಸೀಕೆರೆಯಲ್ಲಿ ಸಭೆ ನಡೆಯಲಿದೆ. ಅಂತಿಮವಾಗಿ ಜನವರಿ 19ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ನಗರದಲ್ಲಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಸಮಾವೇಶದ ಅಂತಿಮ ರೂಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎಂದು ಲಿಂಗೇಶ್ ಹೇಳಿದರು.

ಈ ಬೃಹತ್ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ವಿಶೇಷ ಗೌರವ ಸನ್ಮಾನವನ್ನು ಮಾಡಲಾಗುವುದು. ಕೇಂದ್ರ ಸರ್ಕಾರದಲ್ಲಿ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ, ಅವರ ಸಾಧನೆ ಹಾಗೂ ಪಕ್ಷಕ್ಕೆ ನೀಡುತ್ತಿರುವ ನಾಯಕತ್ವವನ್ನು ಗೌರವಿಸಿ ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Exit mobile version