ಬೆಂಗಳೂರಲ್ಲಿ ‘ಜೈ ಬಾಂಗ್ಲಾ’ ಘೋಷಣೆ ಪ್ರಕರಣ: ಆರೋಪಿ ಮಹಿಳೆಗೆ ಜಾಮೀನು ಮಂಜೂರು

Untitled design 2026 03 18T084328.119

ಬೆಂಗಳೂರು: ‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆನೇಕಲ್ ತಾಲೂಕಿನ ಹುಲಿಮಂಗಲ ಪೋಡು ಗ್ರಾಮದ ನಿವಾಸಿ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ರಾಚಯ್ಯ ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ಪ್ರಕರಣದ ವಿವರಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಆರೋಪಿತ ಮಹಿಳೆಗೆ ಇಬ್ಬರು ಅಪ್ರಾಪ್ತ ಮಕ್ಕಳು ಇದ್ದಾರೆ ಎಂಬ ಅಂಶವನ್ನು ಗಮನಿಸಿದೆ. ಮಕ್ಕಳ ಆರೈಕೆಯ ಹೊಣೆಗಾರಿಕೆ ಸಂಪೂರ್ಣವಾಗಿ ತಾಯಿಯ ಮೇಲಿದೆ ಎಂಬುದನ್ನು ಪರಿಗಣಿಸಿದ ನ್ಯಾಯಾಲಯ, ಮಾನವೀಯ ದೃಷ್ಟಿಯಿಂದ ಜಾಮೀನು ನೀಡಲು ತೀರ್ಮಾನಿಸಿದೆ. ಜೊತೆಗೆ, ಪ್ರಕರಣದ ಸತ್ಯಾಸತ್ಯತೆ ಇನ್ನೂ ಅಂತಿಮವಾಗಿ ಸಾಬೀತಾಗಬೇಕಿರುವುದರಿಂದ, ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.

ಈ ಪ್ರಕರಣದ ಹಿನ್ನೆಲೆ

ಇತ್ತೀಚೆಗೆ ಹುಲಿಮಂಗಲದ ಪೋಡು ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ, ಕೂಲಿಂಗ್ ಗ್ಲಾಸ್ ಧರಿಸಿ ಬಂದ ಮಹಿಳೆಯೊಬ್ಬಳನ್ನು ಅವರು ಮಾತಿಗೆಳೆದು, ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವಂತೆ ಪ್ರೇರೇಪಿಸಿದರು.

ಆದರೆ, ಆಕೆ ಕೋಪದಲ್ಲಿ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದಳು. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಹಲವು ಮಂದಿ ಈ ನಡೆಗೆ ವಿರೋಧ ವ್ಯಕ್ತಪಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ವೀಡಿಯೋ ವೈರಲ್ ಆದ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದರು. ತಕ್ಷಣ ಪೊಲೀಸರು, ಆರೋಪಿತ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ನಂತರ, ಮಹಿಳೆ ಪರ ವಕೀಲರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದರು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಘಟನೆಯು ತೀವ್ರ ಉದ್ದೇಶಪೂರ್ವಕವಲ್ಲ, ಕ್ಷಣಿಕ ಆವೇಶದಲ್ಲಿ ನಡೆದದ್ದು ಎಂದು ತಿಳಿಸಿದರು. ಜೊತೆಗೆ, ಮಹಿಳೆ ಕುಟುಂಬದ ಏಕೈಕ ಸದಸ್ಯೆಯಾಗಿದ್ದು, ಮಕ್ಕಳ ಭವಿಷ್ಯ ಹಿತದೃಷ್ಟಿಯಿಂದ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಈ ವಾದಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಎಸ್‌. ರಾಚಯ್ಯ ಅವರು, ಆರೋಪದ ಗಂಭೀರತೆಯನ್ನೂ ಹಾಗೂ ಮಾನವೀಯ ಅಂಶಗಳನ್ನೂ ಪರಿಗಣಿಸಿ, ಕೆಲವು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದರು. ಆದರೆ, ಪ್ರಕರಣದ ಮುಂದಿನ ವಿಚಾರಣೆ ಮುಂದುವರಿಯಲಿದ್ದು, ಆರೋಪ ಸಾಬೀತಾಗುವವರೆಗೂ ಅಂತಿಮ ತೀರ್ಪು ಬರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Exit mobile version