ರಾಷ್ಟ್ರೀಯ ಕಾರ್ಟಿಂಗ್‌ನಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ ಅಮೋಘ ಗೆಲುವು !

Untitled design (9)

ಬೆಂಗಳೂರು: ಮಿಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ನ 5 ಮತ್ತು 6ನೇ ಸುತ್ತುಗಳು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದು ಕೊನೆಗೊಂಡಿದೆ. ಈ ಸ್ಪರ್ಧೆಯಲ್ಲಿ ಸ್ಥಳೀಯ ಹಿರ್ಮಣಿ ಬೆಂಗಳೂರಿನ ಇಶಾನ್‌ ಮಾದೇಶ್‌ (ಪೆರಿಗ್ರೈನ್ ರೇಸಿಂಗ್‌) ಹಿರಿಯರ ವಿಭಾಗದಲ್ಲಿ ಅತ್ಯಂತ ಪ್ರಭಾವಿ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಮುಂಬೈನ ಕಿಯಾನ್‌ ಶಾ (ರಾಯೊ ರೇಸಿಂಗ್‌) ಮತ್ತು ಕೃಷ್‌ ಗುಪ್ತಾ ಅವರೂ ತಮ್ಮ ತಮ್ಮ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿದರು.

ಹಿರಿಯರ ವಿಭಾಗದಲ್ಲಿ ಇಶಾನ್‌ ಮಾದೇಶ್‌ ಅವರು ತಮ್ಮ ವರ್ಚಸ್ಸನ್ನು ಎಲ್ಲಾ ಹಂತಗಳಲ್ಲಿ ಸ್ಥಾಪಿಸಿದರು. 5ನೇ ಸುತ್ತಿನ ಅರ್ಹತಾ ಸುತ್ತಿನಲ್ಲಿ ಅವರು ಪೋಲ್ ಪೊಸಿಷನ್ ಪಡೆದುಕೊಂಡರು. ಈ ಹಂತದಲ್ಲಿ ರಾಯೊ ರೇಸಿಂಗ್‌ ತಂಡದ ಕೃಷ್‌ ಗುಪ್ತಾ ಅವರು 0.216 ಸೆಕೆಂಡ್‌ ಹಿಂದೆ 2ನೇ ಸ್ಥಾನ ಪಡೆದರೆ, ಹಿರಿಯರ ವಿಭಾಗದಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿದ ಕಿಯಾನ್‌ ಶಾ ಕೇವಲ 0.055 ಸೆಕೆಂಡ್‌ ಹಿನ್ನಡೆಯೊಂದಿಗೆ 3ನೇ ಸ್ಥಾನ ಗಳಿಸಿದರು.

ಹೀಟ್‌ 1 ಮತ್ತು ಪ್ರಿ-ಫೈನಲ್‌ ಸುತ್ತುಗಳಲ್ಲಿ ಇಶಾನ್‌ ಮಾದೇಶ್‌ ಸುಲಭವಾಗಿ ಗೆಲುವು ಸಾಧಿಸಿದರು. ಅಂತಿಮ ಫೈನಲ್‌ ರೇಸ್‌ನಲ್ಲಿ ಅವರು ತಮ್ಮ ಉತ್ತಮ ಫಾರ್ಮ್‌ನ್ನು ಮುಂದುವರೆಸಿ, ಗುರುಗ್ರಾಮದ ಆರವ್‌ ದೆವಾನ್‌ (ಲೀಫ್‌ಫ್ರಾಗ್‌ ರೇಸಿಂಗ್‌) ಮತ್ತು ಕೃಷ್‌ ಗುಪ್ತಾ ಅವರನ್ನು ಹಿಂದಿಕ್ಕಿ 1ನೇ ಸ್ಥಾನ ಪಡೆದರು. ಈ ಗೆಲುವು ಇಶಾನ್‌ ಅವರ ಸಾಮರ್ಥ್ಯ ಮತ್ತು ಸ್ಥಿರತೆಗೆ ಮತ್ತೊಮ್ಮೆ ಮುದ್ರೆಯೊತ್ತಿತು.

ಕಿರಿಯರ ವಿಭಾಗದಲ್ಲಿ ಮುಂಬೈನ ಕಿಯಾನ್‌ ಶಾ ಅವರು ಸ್ಥಿರವಾದ ಮತ್ತು ತಾಳ್ಮೆಯ ಪ್ರದರ್ಶನ ನೀಡಿ ಗಮನ ಸೆಳೆದರು. ಅರ್ಹತಾ ಸುತ್ತಿನಲ್ಲಿ ಅವರು 5ನೇ ಸ್ಥಾನ ಪಡೆದಿದ್ದರು. ಆದರೆ, ಮುಖ್ಯ ರೇಸ್‌ನಲ್ಲಿ ಅವರು ಧೃತಿಗೆಡಲಿಲ್ಲ. ರೇಸ್‌ ಆರಂಭವಾದ ತಕ್ಷಣವೇ ಅವರು 2ನೇ ಸ್ಥಾನಕ್ಕೆ ಏರಿದರು ಮತ್ತು ಆ ಸ್ಥಾನವನ್ನು ಫೈನಲ್‌ ವರೆಗೂ ಕಾಯ್ದುಕೊಂಡರು.

ಫೈನಲ್‌ ರೇಸ್‌ನಲ್ಲಿ ಕಿಯಾನ್‌ ಉತ್ತಮ ಆರಂಭ ಪಡೆದು ಮೊದಲ ಸ್ಥಾನಕ್ಕೆ ಏರಿದ್ದರು. ಆದರೆ, ಪುಣೆಯ ಕ್ರೆಸ್ಟ್‌ ಮೋಟಾರ್‌ಸ್ಪೋರ್ಟ್‌ನ ಅರಾಫತ್‌ ಶೇಖ್‌ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. ರೇಸ್‌ ಸಾಗಿದಂತೆ ಅಗ್ರಸ್ಥಾನಕ್ಕಾಗಿ ಐವರು ರೇಸರ್‌ಗಳ ನಡುವೆ ತೀವ್ರ ಪೈಪೋಟಿ ಉಂಟಾಯಿತು. ಕೊನೆಗೆ, ಕಿಯಾನ್‌ ತಮ್ಮ ತಾಳ್ಮೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿ, ಚೆನ್ನೈನ ಎಶಾಂತ್‌ ವೆಂಕಟೇಶನ್‌ (ಎಂಸ್ಪೋರ್ಟ್‌) ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದರು.

ರಾಯೊ ರೇಸಿಂಗ್‌ ತಂಡದ ಇನ್ನೊಬ್ಬ ರೇಸರ್‌ ಕೃಷ್‌ ಗುಪ್ತಾ ಅವರು ಹಿರಿಯರ ವಿಭಾಗದಲ್ಲಿ ಆಕರ್ಷಕ ಪ್ರದರ್ಶನ ನೀಡಿದರು. ಕೊನೆಯ ಎರಡು ಸುತ್ತುಗಳಲ್ಲಿ ಅವರು ಕ್ರಮವಾಗಿ 3 ಮತ್ತು 2ನೇ ಸ್ಥಾನ ಗಳಿಸಿದರು. ಈ ಸ್ಥಿರ ಫಲಿತಾಂಶಗಳ ಸಹಾಯದಿಂದ ಅವರು ಹಿರಿಯರ ವಿಭಾಗದ ಒಟ್ಟಾರೆ ಲೀಡರ್‌ಬೋರ್ಡ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡರು. ಅದೇ ರೀತಿ, ಕಿರಿಯರ ವಿಭಾಗದಲ್ಲಿ ಗೆಲುವು ಸಾಧಿಸಿದ ಕಿಯಾನ್‌ ಶಾ ಅವರೂ ತಮ್ಮ ವಿಭಾಗದ ಒಟ್ಟಾರೆ ಲೀಡರ್‌ಬೋರ್ಡ್‌ನಲ್ಲಿ 2ನೇ ಸ್ಥಾನಕ್ಕೆ ಏರಿದರು.

5 ಮತ್ತು 6ನೇ ಸುತ್ತುಗಳನ್ನು ಒಟ್ಟಿಗೆ ನಡೆಸಿದ ಕಾರಣ, ರೇಸರ್‌ಗಳ ಫಿಟ್ನೆಸ್‌ ಮತ್ತು ಮಾನಸಿಕ ಸಾಮರ್ಥ್ಯಗಳು ತೀವ್ರ ಪರೀಕ್ಷೆಗೆ ಒಳಪಟ್ಟಿತು. ಎಲ್ಲಾ ರೇಸರ್‌ಗಳು ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದರು. ಮುಂದೆ, ಕಿಯಾನ್‌ ಶಾ ಅವರು ಡಿಸೆಂಬರ್‌ 15-16ರಂದು ಮಲೇಷ್ಯಾದಲ್ಲಿ ನಡೆಯಲಿರುವ ಎಫ್‌ಐಎ ಕಾರ್ಟಿಂಗ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Exit mobile version