ಐಪಿಎಲ್ : ಲಕ್ನೋ ತೊರೆದು ಮುಂಬೈ ಇಂಡಿಯನ್ಸ್‌ಗೆ ಶಾರ್ದುಲ್ ಠಾಕೂರ್ ಸೇರ್ಪಡೆ

Untitled design 2025 11 13T212513.061

ನವದೆಹಲಿ: ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದಿಂದ ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಅವರನ್ನು ಟ್ರೇಡ್ ಡೀಲ್ ಮೂಲಕ ಕರೆತಂದಿದೆ. ಈ ಒಪ್ಪಂದದಡಿ ಮುಂಬೈ ಫ್ರಾಂಚೈಸಿ ಕೇವಲ 2 ಕೋಟಿ ರೂಪಾಯಿಗಳನ್ನು ಪಾವತಿಸಿದೆ.

ಶಾರ್ದುಲ್ ಠಾಕೂರ್ ಅವರ ಐಪಿಎಲ್ ಪಯಣ ಅತ್ಯಂತ ರೋಚಕವಾಗಿದೆ. 2024ರ ಮೆಗಾ ಹರಾಜಿನಲ್ಲಿ ಯಾವುದೇ ತಂಡವೂ ಅವರನ್ನು ಖರೀದಿಸದೇ ಅನ್‌ಸೋಲ್ಡ್ ಆಗಿ ಹೋಗಿದ್ದರು. ಆದರೆ, ಟೂರ್ನಿ ಆರಂಭಕ್ಕೂ ಮುನ್ನ ಲಕ್ನೋ ತಂಡದ ಯುವ ವೇಗಿ ಮೊಹ್ಸಿನ್ ಖಾನ್ ಗಾಯಕ್ಕೀಡಾಗಿ ಹೊರಬಿದ್ದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಎಲ್‌ಎಸ್‌ಜಿ ಫ್ರಾಂಚೈಸಿ, ಶಾರ್ದುಲ್ ಅವರನ್ನು 2 ಕೋಟಿ ರೂಪಾಯಿಗಳಿಗೆ ತಂಡಕ್ಕೆ ಸೇರ್ಪಡೆಗೊಳಿಸಿತು. ಆ ನಂತರ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

2024ರ ಸೀಸನ್‌ನಲ್ಲಿ ಶಾರ್ದುಲ್ ಲಕ್ನೋ ಪರ 10 ಪಂದ್ಯಗಳನ್ನು ಆಡಿದರು. ಈ ಅವಧಿಯಲ್ಲಿ 13 ವಿಕೆಟ್‌ಗಳನ್ನು ಕಿತ್ತುಕೊಂಡರು. ಆರಂಭಿಕ ಎರಡು ಪಂದ್ಯಗಳಲ್ಲೇ 6 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು. ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಕಬಳಿಸಿ, ತಂಡಕ್ಕೆ ಗೆಲುವಿನ ಹಾದಿ ಮಾಡಿಕೊಟ್ಟರು. ಅವಕಾಶ ಸಿಕ್ಕಾಗಲೆಲ್ಲಾ ಮೂಲಕ ಶಾರ್ದುಲ್ ಅವರು  ಉತ್ತಮ ಪ್ರದರ್ಶನ ನೀಡಿದ್ದರು.

ಈಗ ಮುಂಬೈ ಇಂಡಿಯನ್ಸ್ ಅವರನ್ನು ಅದೇ 2 ಕೋಟಿ ರೂಪಾಯಿಗಳಿಗೆ ಟ್ರೇಡ್ ಮಾಡಿಕೊಂಡಿದೆ. ಇದು ತಂಡದ ಬೌಲಿಂಗ್ ದಾಳಿಗೆ ಹೊಸ ಆಯಾಮ ನೀಡಲಿದೆ. ಶಾರ್ದುಲ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ಈವರೆಗೆ 105 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 107 ವಿಕೆಟ್‌ಗಳು ಮತ್ತು 325 ರನ್‌ಗಳನ್ನು ಕಲೆಹಾಕಿದ್ದಾರೆ. ಅವರ ಆಲ್‌ರೌಂಡ್ ಸಾಮರ್ಥ್ಯ ವೇಗದ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮುಂಬೈ ತಂಡಕ್ಕೆ ಬಹುಮುಖ್ಯ.

ಶಾರ್ದುಲ್ ಅವರು 2018 ಮತ್ತು 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಚೆನ್ನೈ ತಂಡದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಈಗ ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮ, ಜಸ್‌ಪ್ರೀತ್ ಬೂಮ್ರಾ ಮುಂತಾದ ದಿಗ್ಗಜರೊಂದಿಗೆ ಆಡುವ ಅವಕಾಶ ಸಿಕ್ಕಿದೆ. ಇದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.

ಈ ಟ್ರೇಡ್ ಡೀಲ್ ಬಗ್ಗೆ ಮೊದಲೇ ಸುಳಿವು ನೀಡಿದ್ದವರು ಸ್ಪಿನ್ ದಿಗ್ಗಜ ಆರ್. ಅಶ್ವಿನ್. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್, ಶಾರ್ದುಲ್ ಅವರನ್ನು ಮುಂಬೈ ತಂಡ ಟ್ರೇಡ್ ಮಾಡುತ್ತಿರುವ ಬಗ್ಗೆ ತಿಳಿಸಿದ್ದರು. ಅಶ್ವಿನ್ ಅವರ ಮಾತುಗಳು ನಿಜವಾಗಿವೆ. ಇದು ಐಪಿಎಲ್‌ನ ಆಫ್-ಸೀಸನ್‌ನಲ್ಲಿ ದೊಡ್ಡ ಸುದ್ದಿಯಾಗಿದೆ.

Exit mobile version