ಬೆಂಗಳೂರು, ನ.16: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ರಾಜಾಜಿನಗರದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಏಳು ಮಂದಿಯನ್ನು ಹತ್ಯೆ ಮಾಡಿ ಅವರ ಮೃತದೇಹಗಳನ್ನು ಸಾಗಿಸಲು ಆರೋಪಿ ಇಂದುಶೇಖರ್ ರೂಪಿಸಿದ್ದ ತಂತ್ರ ಇದೀಗ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಿಕೋದ್ಯಮದ ಹೆಸರನ್ನೇ ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ, ತನ್ನ ಕಾರಿಗೆ ‘PRESS’ ಎಂಬ ಬೋರ್ಡ್ ಹಾಗೂ ಪತ್ರಕರ್ತರ ಪ್ರವಾಸದ ಬ್ಯಾನರ್ ಅಳವಡಿಸಿಕೊಂಡು ಓಡಾಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶವ ಸಾಗಿಸಲು ‘ಪ್ರೆಸ್’ ಹೆಸರಿನ ದುರ್ಬಳಕೆ!
ರಾಜಾಜಿನಗರದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಮೃತದೇಹಗಳನ್ನು ಸಾಗಿಸಲು ಆರೋಪಿ ಇಂದುಶೇಖರ್ ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಸಾಮಾನ್ಯವಾಗಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಾರೆ. ಆದರೆ ಪತ್ರಿಕಾ ಸಂಸ್ಥೆಯ ಹೆಸರಿನಲ್ಲಿರುವ ವಾಹನಗಳನ್ನು ಪೊಲೀಸರು ಅಷ್ಟಾಗಿ ತಡೆಯುವುದಿಲ್ಲ ಎಂಬ ಲೆಕ್ಕಾಚಾರವನ್ನು ಆರೋಪಿ ಹಾಕಿದ್ದ ಎನ್ನಲಾಗಿದೆ.
ಇದಕ್ಕಾಗಿ ತನ್ನ ಯೆಲ್ಲೋ ಬೋರ್ಡ್ ಟೊಯೋಟಾ ಇಟಿಯೋಸ್ ಕಾರಿನ ಮುಂಭಾಗದ ಗ್ಲಾಸ್ ಮೇಲೆ ‘PRESS’ ಎಂಬ ಸಿಂಬಲ್ ಅಳವಡಿಸಿಕೊಂಡಿದ್ದನು. ಪತ್ರಕರ್ತರ ವಾಹನ ಎಂಬ ಭಾವನೆ ಮೂಡಿಸುವ ಮೂಲಕ ಪೊಲೀಸರ ಅನುಮಾನದಿಂದ ತಪ್ಪಿಸಿಕೊಳ್ಳುವುದು ಆತನ ಪ್ರಮುಖ ಉದ್ದೇಶವಾಗಿತ್ತು.
ನಂಬರ್ ಪ್ಲೇಟ್ ಕಾಣದಂತೆ ಬ್ಯಾನರ್!
ಇಂದುಶೇಖರ್‌ನ ಪ್ಲ್ಯಾನ್ ಇಲ್ಲಿಗೇ ನಿಂತಿರಲಿಲ್ಲ. ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರ ಪ್ರವಾಸ ಎಂಬ ಬರಹವಿರುವ ದೊಡ್ಡ ಬ್ಯಾನರ್ ಒಂದನ್ನು ಸಿದ್ಧಪಡಿಸಿದ್ದನು. ಅದನ್ನು ತನ್ನ ಕಾರಿನ ಹಿಂಭಾಗಕ್ಕೆ ಅಳವಡಿಸಿಕೊಂಡಿದ್ದನು. ಆದರೆ ಈ ಬ್ಯಾನರ್ ಕಾರಿನ ನಂಬರ್ ಪ್ಲೇಟ್ ಕಾಣದಂತೆ ಅಡ್ಡಲಾಗಿ ಕಟ್ಟಲಾಗಿತ್ತು ಎನ್ನಲಾಗಿದೆ.
ಪತ್ರಕರ್ತರ ಪ್ರವಾಸಕ್ಕೆ ತೆರಳುತ್ತಿರುವ ವಾಹನ ಎಂಬಂತೆ ಬಿಂಬಿಸಿಕೊಂಡು ಯಾವುದೇ ಅನುಮಾನ ಬಾರದಂತೆ ಪ್ರಯಾಣ ಮಾಡುವುದು ಆತನ ತಂತ್ರವಾಗಿತ್ತು. ಹೀಗಾಗಿ ಏಳು ಮೃತದೇಹಗಳನ್ನು ಸಾಗಿಸುವಾಗಲೂ ಪೊಲೀಸರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಈ ವಿಧಾನ ಅನುಸರಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಪ್ರಶ್ನಿಸಿದರೆ ತೋರಿಸಲು ದಾಖಲೆಗಳೂ ರೆಡಿ!
ಒಂದು ವೇಳೆ ಮಾರ್ಗಮಧ್ಯೆ ಪೊಲೀಸರು ಅಥವಾ ಸಾರ್ವಜನಿಕರು ಕಾರನ್ನು ತಡೆದು ಪ್ರಶ್ನಿಸಿದರೆ ಏನು ಮಾಡಬೇಕು ಎಂಬುದಕ್ಕೂ ಆರೋಪಿ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ತನ್ನ ಬಳಿ ಠಾಣಾ ವರದಿ ಪತ್ರಿಕೆ ಹಾಗೂ ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡಿದ್ದನು. ಯಾರಾದರೂ ಅನುಮಾನ ವ್ಯಕ್ತಪಡಿಸಿದರೆ ತಾನು ಪತ್ರಕರ್ತ ಎಂದು ಪರಿಚಯಿಸಿಕೊಂಡು, ಪ್ರವಾಸಕ್ಕೆ ತೆರಳುತ್ತಿರುವುದಾಗಿ ಹೇಳಿ ನಂಬಿಸುತ್ತಿದ್ದನು.
ಈ ರೀತಿಯಾಗಿ ಪತ್ರಿಕೋದ್ಯಮದ ಗುರುತನ್ನು ದುರ್ಬಳಕೆ ಮಾಡಿಕೊಂಡು ತನ್ನ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಸಕಲೇಶಪುರ ಘಾಟಿ, ಮಂಗಳೂರಿನಲ್ಲೂ ಓಡಾಟ!
ತನಿಖೆಯಲ್ಲಿ ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಇಂದುಶೇಖರ್ ಇದೇ ಬ್ಯಾನರ್ ಅಳವಡಿಸಿಕೊಂಡಿದ್ದ ಕಾರಿನಲ್ಲಿ ಸಕಲೇಶಪುರ ಘಾಟಿ, ಮಂಗಳೂರು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಓಡಾಡಿರುವುದು ಪತ್ತೆಯಾಗಿದೆ.
ಒಂದೇ ಬಾರಿಗೆ ಏಳು ಮೃತದೇಹಗಳನ್ನು ಸಾಗಿಸಿದರೆ ಪೊಲೀಸರಿಗೆ ಅನುಮಾನ ಬರುವ ಸಾಧ್ಯತೆ ಇತ್ತು. ಹೀಗಾಗಿ ಹಂತ ಹಂತವಾಗಿ ಮೃತದೇಹಗಳನ್ನು ವಿವಿಧ ಪ್ರದೇಶಗಳಿಗೆ ಸಾಗಿಸಿ ವಿಲೇವಾರಿ ಮಾಡಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿಯೂ ಇದೇ ರೀತಿಯ ಬ್ಯಾನರ್ ಹಾಗೂ ‘PRESS’ ಗುರುತನ್ನು ಬಳಸಿಕೊಂಡು ಮೃತದೇಹಗಳನ್ನು ಸಾಗಿಸಲಾಗಿದೆಯೇ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆ ಆರೋಪಿಯ ಪ್ರಯಾಣದ ಮಾರ್ಗಗಳು, ಕಾರಿನ ಓಡಾಟ ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸರಿಂದ ತೀವ್ರ ವಿಚಾರಣೆ
ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಮೃತದೇಹಗಳನ್ನು ಯಾವ ಮಾರ್ಗದಲ್ಲಿ ಸಾಗಿಸಲಾಯಿತು? ಯಾವ ಸ್ಥಳಗಳಲ್ಲಿ ವಿಲೇವಾರಿ ಮಾಡಲಾಯಿತು? ಈ ಕೃತ್ಯದಲ್ಲಿ ಇತರರು ಭಾಗಿಯಾಗಿದ್ದಾರೆಯೇ? ಪತ್ರಿಕಾ ಗುರುತಿನ ಬ್ಯಾನರ್ ತಯಾರಿಸಲು ಯಾರ ಸಹಾಯ ಪಡೆಯಲಾಗಿತ್ತು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
