ರಾಯಚೂರು: ವಿಧಿಯಾಟ ಎಷ್ಟು ಕ್ರೂರವಾಗಿರುತ್ತದೆ ಎಂಬುದಕ್ಕೆ ರಾಯಚೂರು ಜಿಲ್ಲೆಯಲ್ಲಿ ನಡೆದಿರುವ ಹೃದಯವಿದ್ರಾವಕ ಘಟನೆಯೇ ಸಾಕ್ಷಿಯಾಗಿದೆ. ತಂದೆಯ ಸಾವಿನ ಸುದ್ದಿ ಕೇಳಿ ತೀವ್ರ ದುಃಖಕ್ಕೊಳಗಾದ ಮಗನೂ ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿರುವ ದುರಂತ ಘಟನೆ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ.
ತಂದೆಯ ಅಗಲಿಕೆಯ ನೋವನ್ನು ಸಹಿಸಿಕೊಳ್ಳಲಾಗದೆ ಮಗನೂ ಪ್ರಾಣ ಕಳೆದುಕೊಂಡಿರುವ ಘಟನೆ ಸ್ಥಳೀಯರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ತಂದೆ-ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಂದೆ ಅಮೀನ್ ಸಾಬ್ ಹೃದಯಾಘಾತದಿಂದ ಸಾವು
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದ ನಿವಾಸಿ ಅಮೀನ್ ಸಾಬ್ (58) ಅವರು ನವೆಂಬರ್ 15ರಂದು ತೀವ್ರ ಹೃದಯಾಘಾತದಿಂದ ದಿಢೀರ್ ಮೃತಪಟ್ಟಿದ್ದರು. ಮನೆಯ ಹಿರಿಯರಾಗಿದ್ದ ಅಮೀನ್ ಸಾಬ್ ಅವರ ಅಕಾಲಿಕ ನಿಧನ ಕುಟುಂಬಸ್ಥರಿಗೆ ಆಘಾತ ತಂದಿತ್ತು. ಕುಟುಂಬಕ್ಕೆ ಆಸರೆಯಾಗಿದ್ದ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಮನೆಯವರೆಲ್ಲರೂ ಕಣ್ಣೀರಿಡುತ್ತಿದ್ದರು.
ತಂದೆಯ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ಮಗ
ಅಮೀನ್ ಸಾಬ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪುತ್ರ ಮೆಹಬೂಬ್ ಸಾಬ್ (37) ತೀವ್ರ ಆಘಾತಕ್ಕೊಳಗಾಗಿದ್ದನು. ತಂದೆಯ ಮೇಲಿನ ಪ್ರೀತಿಯಿಂದಾಗಿ ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾನೆ. ತಂದೆಯ ಸಾವಿನಿಂದ ಮನಸ್ಸಿಗೆ ತೀವ್ರ ನೋವುಂಟಾಗಿದ್ದ ಮೆಹಬೂಬ್ ಸಾಬ್ ಕೆಲ ಸಮಯದ ಬಳಿಕ ಕುಸಿದುಬಿದ್ದಿದ್ದಾನೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವು
ಮೆಹಬೂಬ್ ಸಾಬ್ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೆಹಬೂಬ್ ಸಾಬ್ ಕೊನೆಯುಸಿರೆಳೆದಿದ್ದಾನೆ.
ತಂದೆ ಅಮೀನ್ ಸಾಬ್ ಮೃತಪಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಮಗ ಮೆಹಬೂಬ್ ಸಾಬ್ ಕೂಡ ಮೃತಪಟ್ಟಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಒಂದೆಡೆ ತಂದೆಯ ಸಾವಿನ ದುಃಖದಲ್ಲಿದ್ದ ಕುಟುಂಬಕ್ಕೆ ಮಗನ ಸಾವಿನ ಸುದ್ದಿ ಮತ್ತಷ್ಟು ಆಘಾತ ನೀಡಿದೆ.
ಒಂದೇ ಮನೆಯಲ್ಲಿ ಎರಡು ಶವಗಳು: ಗ್ರಾಮದಲ್ಲಿ ಶೋಕ
ತಂದೆಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ಕುಟುಂಬಸ್ಥರು ಮಗನ ಸಾವಿನಿಂದ ದಿಕ್ಕುತೋಚದಂತಾಗಿದ್ದಾರೆ. ತಂದೆ-ಮಗನ ಮೃತದೇಹಗಳನ್ನು ಸ್ವಗ್ರಾಮದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
