ಹುಬ್ಬಳ್ಳಿ ಶಿಕ್ಷಕನ ರಾಸಲೀಲೆ ಒಂದಾ, ಎರಡಾ..?: ಪತ್ನಿಗೆ ನಿದ್ರೆ ಮಾತ್ರೆ ನೀಡಿ ಎದುರು ಮನೆಯವಳ ಜೊತೆ ಚಕ್ಕಂದ

Untitled design 2026 04 09T134550.233

ಹುಬ್ಬಳ್ಳಿ: ಗೃಹಿಣಿಯೊಬ್ಬಳಿಗೆ ಪತಿಯ ಅಕ್ರಮ ಸಂಬಂಧ ಮತ್ತು ಸವತಿ ಕಾಟ ದೊಡ್ಡ ಶಾಪವಾಗಿ ಪರಿಣಮಿಸಿದೆ. ಪತ್ನಿಗೆ ನಿದ್ರೆ ಮಾತ್ರೆ ನೀಡಿ ಮನೆಗೆ ಪರಸ್ತ್ರೀಯನ್ನು ಕರೆತರುತ್ತಿದ್ದ ಪತಿರಾಯನ ಕೃತ್ಯ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವೃತ್ತಿಯಲ್ಲಿ ಶಿಕ್ಷಕನಾಗಿರುವ ವ್ಯಕ್ತಿ ಸಮಾಜದಲ್ಲಿ ನಾಚಿಕೆಗೇಡಿನ ಕೃತ್ಯವೆಸಗಿದ್ದು, ಸಂತ್ರಸ್ತೆ ಪತ್ನಿ ಕಣ್ಣೀರಿಟ್ಟಿದ್ದಾರೆ..

ಯಾರೀ ಶಿಕ್ಷಕ ಮತ್ತು ಸಂತ್ರಸ್ತೆ?

ಹುಬ್ಬಳ್ಳಿಯ ವಿಜಯನಗರ ನಿವಾಸಿ ಕಾಂಚನ ಎಂಬುವವರು ಪತಿಯಿಂದ ವಂಚನೆಗೊಳಗಾದ ದುರ್ದೈವಿ. ಮೂಲತಃ ಬಿಜಾಪುರದವರಾದ ಮಾಲಿಂಗಪ್ಪ ರ್ಯಾಗಿ ಎಂಬುವವರ ಜೊತೆ ಕಾಂಚನ ಅವರ ವಿವಾಹ 2016ರಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈ ದಂಪತಿಗೆ ಮೂರು ವರ್ಷದ ಪುಟ್ಟ ಮಗುವೂ ಇದೆ. ವೃತ್ತಿಯಲ್ಲಿ ಶಿಕ್ಷಕನಾಗಿದ್ದಾನೆ ಮಾಲಿಂಗಪ್ಪ. ಆದರೆ ಕಳೆದ ಕೆಲವು ವರ್ಷಗಳಿಂದ ಈತ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಾಟ್ಸಾಪ್ ಮೆಸೇಜ್‌ನಿಂದ ರಹಸ್ಯ ಬಯಲು

ಪತಿಯ ವಾಟ್ಸಾಪ್ ಸಂದೇಶಗಳನ್ನು ಆಕಸ್ಮಿಕವಾಗಿ ಗಮನಿಸಿದ ಕಾಂಚನ ಅವರಿಗೆ ಪತಿಯ ಅಕ್ರಮ ಸಂಬಂಧದ ವಿಷಯ ತಿಳಿದಿದೆ. “ಚಿನ್ನು, I Love You” ಎಂಬ ಮೆಸೇಜ್‌ಗಳು ಮತ್ತು ಅನೇಕ ಸಂಭಾಷಣೆಗಳು ಕಾಂಚನ ಕಣ್ಣಿಗೆ ಬಿದ್ದವು. ಪತಿಯನ್ನು ಪ್ರಶ್ನಿಸಿದಾಗ ಕಾಂಚನ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಮಾಲಿಂಗಪ್ಪ ಶುರು ಮಾಡಿದ ಎನ್ನಲಾಗಿದೆ.

ನಿದ್ರೆ ಮಾತ್ರೆಯ ಆಘಾತಕಾರಿ ಬಳಕೆ

ಅಷ್ಟೇ ಅಲ್ಲದೆ, ಪತಿ ಮಾಲಿಂಗಪ್ಪ ಪ್ರತಿನಿತ್ಯ ಪತ್ನಿಗೆ ನಿದ್ರೆ ಮಾತ್ರೆ ನೀಡಿ, ಆಕೆ ಗಾಢ ನಿದ್ರೆಗೆ ಜಾರಿದ ನಂತರ ಪರಸ್ತ್ರೀಯನ್ನು ಮನೆಗೆ ಕರೆತರುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಒಮ್ಮೊಮ್ಮೆ ಸಂತ್ರಸ್ತೆ ಎಚ್ಚರವಾದಾಗ, “ನೀವು ಕನಸು ಕಂಡಿದ್ದೀರಾ, ಏನೂ ಆಗಿಲ್ಲ” ಎಂದು ಪತಿ ಮರಳಿ ನಿದ್ರೆ ಮಾತ್ರೆ ಕೊಡುತ್ತಿದ್ದ ಎಂದು ಕಾಂಚನ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. 

ಆತ್ಮಹತ್ಯೆಗೂ ಯತ್ನಿಸಿದ ಕಾಂಚನ

ಪತಿಯ ಈ ನಡೆ ಹಾಗೂ ಸತತ ಕಿರುಕುಳದಿಂದ ಬೇಸತ್ತ ಕಾಂಚನ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಪತಿ ಮಾತ್ರ ತನ್ನ ಹಾದಿ ಬದಲಿಸಲಿಲ್ಲ. ಬದಲಾಗಿ ಈಗ ಹೆಂಡತಿಯೇ ಬೇಡ ಎಂದು ಆಕೆಯನ್ನು ತವರು ಮನೆಗೆ ಬಿಟ್ಟು ಹೋಗಿದ್ದಾನೆ. 

ಪೊಲೀಸ್ ಠಾಣೆಗೆ ಮೊರೆ

ಇದರಿಂದ ನೊಂದ ಕಾಂಚನ ಅವರು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮಾಲಿಂಗಪ್ಪನನ್ನು ವಿಚಾರಣೆಗೆ ಕರೆಸಿದ್ದಾರೆ. ಆದರೆ, ಪೊಲೀಸರು ಕೇವಲ ಕೌನ್ಸಿಲಿಂಗ್ ನೆಪದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. “ನನಗೆ ನ್ಯಾಯ ಬೇಕು, ಇಂತಹ ಪತಿಗೆ ತಕ್ಕ ಶಿಕ್ಷೆಯಾಗಬೇಕು. ನಾನು ಇನ್ನು ಮುಂದೆ ಅವನೊಂದಿಗೆ ಬದುಕಲಾರೆ. ಆದರೆ ಇನ್ನೂ ಯಾರೂ ಈ ರೀತಿ ವಂಚನೆಗೆ ಒಳಗಾಗಬಾರದು” ಎಂದು ಕಾಂಚನ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.

Exit mobile version