ಹುಬ್ಬಳ್ಳಿ: ದೇಶದ ರಕ್ಷಣೆಗಾಗಿ ಯೋಧರು ಮಾಡಿರುವ ತ್ಯಾಗ ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ. ಕಾರ್ಗಿಲ್ ವಿಜಯದಲ್ಲಿ ನಮ್ಮ ಯೋಧರು ತೋರಿದ ಅಪ್ರತಿಮ ಶೌರ್ಯ, ಸಾಹಸಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದ್ದು, ದೇಶದ ಸೇನಾ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಗೆಲುವನ್ನು ತಂದು ಕೊಟ್ಟ ನಮ್ಮ ಹೆಮ್ಮೆಯ ಯೋಧರಿಗೆ ಸೆಲ್ಯೂಟ್ ಹೇಳೋಣ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಮಹಾನ್ ವೀರರಿಗೆ ಗೌರವ ಸಲ್ಲಿಸೋಣ ಎಂದು ಸ್ವರ್ಣ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ವಿಎಸ್‍ವಿ ಪ್ರಸಾದ ಹೇಳಿದರು.
ನಗರದ ಭಾವಾಜಿ ಮಠದ ಉದ್ಯಾನದಲ್ಲಿ ಭಗತ್ ಸಿಂಗ್ ಸೇವಾ ಸಂಘದವರು ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಸಸಿನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ , ಇಡೀ ಸಮಾಜದ ಒಳಿತಿಗಾಗಿ ದುಡಿದ, ತ್ಯಾಗ ಮಾಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸಂಪ್ರದಾಯ. ಅಂಥ ಒಂದು ಶ್ಲಾಘನೀಯ ಕಾರ್ಯವನ್ನು ಭಗತಸಿಂಗ್ ಸಂಸ್ಥೆ ಮಾಡುತ್ತಿದೆ. ಪ್ರತೀ ವರ್ಷವೂ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಮತ್ತು ದೇಶ ರಕ್ಷಣೆಯ ವಿಷಯದಲ್ಲಿನ ಅಡ್ಡಿ-ಆತಂಕಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತಿದೆ ಎಂದು ಭಗತ್‍ಸಿಂಗ ಸೇವಾಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಇಂಥ ಕಾರ್ಯಗಳಿಗೆ ತಾವು ಸದಾ ಅಗತ್ಯ ಸಹಾಯ ಸಹಕಾರಗಳನ್ನು ನೀಡುವುದಾಗಿ ಹೇಳಿದರು.
ಈ ವೇಳೆ ಭಗತ್‍ಸಿಂಗ್ ಸೇವಾಸಂಸ್ಥೆಯ ವಿಶಾಲ ಜಾಧವ,ಸುನೀಲ್ ಬೂದುರ, ರಾಹುಲ್‍ವಾಗ್ಮರೆ , ಪ್ರೇಮಸಿಂಗ್ ರಾಠೋಡ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಮಾಜಿ ಸೈನಿಕರಾದ ಸುಬೇದಾರ ರಾಮಸಿದ್ದಪ್ಪ ಜಾಯಿ, ಸುಬೇದಾರ ಬಾಬು ಅರವಳ್ಳಿ, ಲೆಫ್ಟನೆಂಟ್ ಕೆ.ಸಿ.ಹಿರೇಮಠ, ಹವಾಲ್ದಾರ ಅನೀಲ ಕುಮಾರ ಪಿ.ಎಂ.ಸಂತೋಷ ರಾಥೋಡ್ ಭಾಗವಹಿಸಿದ್ದರು. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
