ವಿಶ್ವದ ಮಾದರಿಯಲ್ಲೇ ಭಾರತಕ್ಕೂ ಪ್ಲಾಸ್ಟಿಕ್‌ ನೋಟುಗಳು?

Untitled design 2026 07 28T133929.215

 ದೆಹಲಿ (ಜುಲೈ.28 ) :ಭಾರತದಲ್ಲೂ ಶೀಘ್ರದಲ್ಲೇ ಪಾಲಿಮರ್‌ (ಪ್ಲಾಸ್ಟಿಕ್‌) ಕರೆನ್ಸಿ ನೋಟುಗಳು ಚಲಾವಣೆಗೆ ಬರುವಂತಹ ಸಾಧ್ಯತೆಗಳು ಹೆಚ್ಚಾಗಿವೆ. ನೋಟುಗಳ ಬಾಳಿಕೆ ಹೆಚ್ಚಿಸುವುದು ಹಾಗೂ ಅವುಗಳನ್ನು ಹೆಚ್ಚು ಸುರಕ್ಷಿತಗೊಳಿಸುವುದು ಕೇಂದ್ರ ಸರ್ಕಾರದ ಮೊದಲ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ₹10 ಮತ್ತು ₹20 ಮೌಲ್ಯದ ಪಾಲಿಮರ್‌ ನೋಟುಗಳನ್ನು ಪರಿಚಯಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ವರದಿಗಳು ಸೂಚಿಸುತ್ತಿವೆ.
ಪ್ರಸ್ತುತ ವಿಶ್ವದಲ್ಲಿ ಹಲವಾರು ದೇಶಗಳು ಪಾಲಿಮರ್‌ ಕರೆನ್ಸಿಯನ್ನು ಯಶಸ್ವಿಯಾಗಿ ಬಳಸುತ್ತಿವೆ. ಈ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಹೊಂದಿದ್ದು, ನೀರಿನಲ್ಲಿ ನೆನೆದರೂ ಹಾಳಾಗುವುದಿಲ್ಲ. ಸುಲಭವಾಗಿ ಹರಿದು ಹೋಗದಿರುವುದರಿಂದ ಅವುಗಳ ಬಳಕೆ ಅವಧಿ ದೀರ್ಘವಾಗಿರುತ್ತದೆ. ಜೊತೆಗೆ, ನಕಲಿ ನೋಟುಗಳ ತಯಾರಿಕೆಯನ್ನು ತಡೆಯಲು ಅಗತ್ಯವಾದ ಆಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಬಹುದಾಗಿದೆ.
ಭಾರತದಲ್ಲಿಯೂ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಪಾಲಿಮರ್‌ ನೋಟುಗಳನ್ನು ಪರಿಚಯಿಸುವ ಕುರಿತು ಪರಿಶೀಲನೆ ನಡೆಸಿತ್ತು. ಆದರೆ, ದೇಶದ ಹವಾಮಾನ ಹಾಗೂ ಬಳಕೆಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಆ ಯೋಜನೆಯನ್ನು ಮುಂದುವರಿಸಲಾಗಿರಲಿಲ್ಲ. ಇದೀಗ ಮತ್ತೆ ಈ ವಿಚಾರ ಚರ್ಚೆಗೆ ಬಂದಿದ್ದು, ವರ್ಷದ ಅಂತ್ಯದೊಳಗೆ ಪ್ರಾಯೋಗಿಕವಾಗಿ ಹೊಸ ನೋಟುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಮಲಾಪುರಂ ಮೂಲದ ಕರೆನ್ಸಿ ಸಂಗ್ರಹಕಾರದ ಪುತ್ಸಾ ಕೃಷ್ಣ ಕಾಮೇಶ್ವರ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರು ವಿಶ್ವದ 68 ದೇಶಗಳಿಗೆ ಸೇರಿದ ಒಟ್ಟು 144 ಪಾಲಿಮರ್‌ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿದ್ದು, ವಿವಿಧ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ನೋಟುಗಳ ವೈಶಿಷ್ಟ್ಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದಾರೆ. ಪಾಲಿಮರ್‌ ನೋಟುಗಳು ದೀರ್ಘಕಾಲ ಬಾಳಿಕೆ, ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಭದ್ರತೆಯನ್ನು ಒದಗಿಸುವ ಕಾರಣದಿಂದ ಭವಿಷ್ಯದಲ್ಲಿ ಭಾರತದಲ್ಲೂ ಇವುಗಳ ಬಳಕೆ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

Exit mobile version