ಮೈಸೂರು: ಹೆಣ್ಣುಮಕ್ಕಳಿಗೆ ಮೈಸೂರು ರೇಷ್ಮೆ (Mysore Silk) ಸೀರೆ ಎಂದರೆ ಎಲ್ಲಿಲ್ಲದ ವ್ಯಾಮೋಹ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ನಿಮ್ಮ ಜೇಬಿನಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದರೂ ಮನಸ್ಸಿಗೆ ಇಷ್ಟವಾದ ಬಣ್ಣದ ಮೈಸೂರು ಸಿಲ್ಕ್ ಸೀರೆ ಸಿಗುವುದು ಅಸಾಧ್ಯ ಎಂಬಂತಾಗಿದೆ. ರಾಜ್ಯದಲ್ಲಿ ಮೈಸೂರು ರೇಷ್ಮೆ ಸೀರೆಗಳಿಗೆ ಬೇಡಿಕೆ ಮುಗಿಲು ಮುಟ್ಟಿದ್ದರೂ, ಕೆಎಸ್‌ಐಸಿ (KSIC) ಮಳಿಗೆಗಳಲ್ಲಿ ಸೀರೆಗಳ ಕೊರತೆ ಎದುರಾಗಿದೆ.
ಬೆಳಿಗ್ಗೆ 4 ಗಂಟೆಯಿಂದಲೇ ಸರತಿ ಸಾಲು
ಮೈಸೂರು ಮತ್ತು ಬೆಂಗಳೂರಿನ ಕೆಎಸ್‌ಐಸಿ ಮಳಿಗೆಗಳ ಮುಂದೆ ಮಹಿಳೆಯರು ಬೆಳಿಗ್ಗೆ 4 ಗಂಟೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವೆಂದರೆ, ಸೀರೆ ಪಡೆಯಲು ಟೋಕನ್ ವ್ಯವಸ್ಥೆ ಜಾರಿಯಲ್ಲಿದ್ದು, ಒಬ್ಬ ಗ್ರಾಹಕರಿಗೆ ಕೇವಲ ಒಂದು ಸೀರೆ ಮಾತ್ರ ಎಂಬ ಕಟ್ಟುನಿಟ್ಟಿನ ನಿಯಮವಿದ್ದರೂ ಸ್ಟಾಕ್ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಬುಧವಾರ ಮತ್ತು ಶುಕ್ರವಾರ ಮಾತ್ರ ಸೀರೆಗಳು ಮಾರಾಟಕ್ಕೆ ಸಿಗುತ್ತಿದ್ದು, ಮದುವೆ ಹಾಗೂ ಹಬ್ಬಗಳ ಸೀಸನ್‌ನಲ್ಲಿ ಮಹಿಳೆಯರು ಈ ಸೀರೆ ಪಡೆಯಲಾಗದೇ ನಿರಾಶೆಯಿಂದ ಹಿಂತಿರುಗುವಂತಾಗಿದೆ.
ಬೇಡಿಕೆ ಹೆಚ್ಚು, ಪೂರೈಕೆ ಕಮ್ಮಿ-ಕಾರಣವೇನು ?
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಆರಂಭವಾದ ಈ ರೇಷ್ಮೆ ಉದ್ಯಮಕ್ಕೆ ಈಗ ಉತ್ಪಾದನಾ ಕೊರತೆಯ ಬಿಸಿ ತಟ್ಟಿದೆ. ಮೊದಲೆಯದಾಗಿ ಸಿಬ್ಬಂದಿ ಕೊರತೆ ತಟ್ಟಿದೆ. ಹೌದು ಮೈಸೂರಿನ ನೇಯ್ಕೆ ಘಟಕ ಹಾಗೂ ಟಿ. ನರಸೀಪುರದ ಘಟಕಗಳಲ್ಲಿ ನುರಿತ ನೇಯ್ಗೆಗಾರರ ಸಂಖ್ಯೆ ಕಡಿಮೆಯಾಗಿದೆ. ಅದರೊಟ್ಟಿಗೆ ಉತ್ಪಾದನಾ ಘಟಕಗಳಲ್ಲಿ ಆಧುನಿಕ ತಂತ್ರಜ್ಞಾನದ ಕೊರತೆ ಇರುವುದರಿಂದ ಬೇಡಿಕೆಗೆ ತಕ್ಕಷ್ಟು ವೇಗವಾಗಿ ಸೀರೆಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಅಪ್ಪಟ ರೇಷ್ಮೆ ಮತ್ತು ಶುದ್ಧ ಚಿನ್ನದ ಜರಿ ಬಳಸುವ ಕಾರಣದಿಂದಾಗಿ ಪ್ರತಿ ಸೀರೆಯ ತಯಾರಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ ಹೀಗಾಗಿ ಸೀರೆ ಉತ್ಪಾದನೆ ಕಡಿಮೆಯಾಗಿತ್ತಿದೆ.
ಹಳೆಯ ಸೀರೆಗೆ ಹೊಸ ಬಣ್ಣ
ಮೈಸೂರು ಸಿಲ್ಕ್ ಸೀರೆಗಳ ವಿಶೇಷವೆಂದರೆ ಇವುಗಳಿಗೆ ಮರು ಮಾರಾಟ (Resale value) ಮೌಲ್ಯವಿದೆ. ಅಲ್ಲದೆ, ನಿಮ್ಮ ಬಳಿ ಹಳೆಯ ಮೈಸೂರು ಸಿಲ್ಕ್ ಸೀರೆ ಇದ್ದು ಅದರ ಬಣ್ಣ ಮಸುಕಾಗಿದ್ದರೆ ಅಥವಾ ಬೇರೆ ಬಣ್ಣಕ್ಕೆ ಬದಲಿಸಬೇಕೆಂದು ಅನಿಸಿದರೆ, ಬೆಂಗಳೂರು ಮತ್ತು ಮೈಸೂರಿನ ಡೈಯಿಂಗ್ ಕೇಂದ್ರಗಳಲ್ಲಿ ಬಣ್ಣ ಬದಲಿಸಿಕೊಳ್ಳುವ ಅವಕಾಶವೂ ಇದೆ. ಸದ್ಯ ₹23,000 ರಿಂದ ಹಿಡಿದು ₹2.5 ಲಕ್ಷದವರೆಗೆ ಈ ಸೀರೆಗಳ ಬೆಲೆ ಇದೆ.
ಗ್ರಾಹಕರ ಸಂಕಷ್ಟ ಅರಿತಿರುವ ಕೆಎಸ್‌ಐಸಿ, ಇನ್ಮುಂದೆ ಹೆಚ್ಚಿನ ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಮತ್ತು ಉತ್ಪಾದನೆ ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ.





