ಬೆಂಗಳೂರು (ನ.3): ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ನಡೆಸಿದ ಆರೋಪದಡಿ ಮಹದೇವಪುರ ಪೊಲೀಸ್ ಠಾಣೆಯ ಪೇದೆ ಫಕೀರಪ್ಪ ಹಟ್ಟಿ (30) ವಿರುದ್ಧ ದಾಖಲಾದ ಕೇಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಮೂವರು ಮಕ್ಕಳ ತಾಯಿಯೊಬ್ಬರು ದಾಖಲಿಸಿದ್ದ ದೂರನ್ನು ತಿರಸ್ಕರಿಸಿದ್ದು, “ದೂರುದಾರೆಯ ವೈವಾಹಿಕ ಸ್ಥಿತಿಗತಿಯೇ ಮದುವೆ ಭರವಸೆಯ ಕಲ್ಪನೆಯನ್ನು ಅಸಂಭವಗೊಳಿಸುತ್ತದೆ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
2019ರ ಅಕ್ಟೋಬರ್‌ನಲ್ಲಿ ದೂರುದಾರೆ ಮನೆ ಮಾಲೀಕರೊಂದಿಗೆ ಭೋಗ್ಯ ಹಣ ವಾಪಸಾತಿ ವಿವಾದದಲ್ಲಿ ದೂರು ದಾಖಲಿಸಲು ಮಹದೇವಪುರ ಠಾಣೆಗೆ ತೆರಳಿದ್ದರು. ಆಗ ಠಾಣೆಯ ಪೇದೆ ಫಕೀರಪ್ಪ ಅವರ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕ ಆರಂಭಿಸಿದ್ದರು. ಇಬ್ಬರ ನಡುವೆ ಸಂದೇಶ ವಿನಿಮಯದಿಂದ ಪ್ರೀತಿ ಬೆಳೆಯಿತು. ಆ ನಂತರ ದೈಹಿಕ ಸಂಬಂಧ ಏರ್ಪಟ್ಟು, ಸುಮಾರು ಎರಡೂವರೆ ವರ್ಷಗಳ ಕಾಲ ಮುಂದುವರಿದಿತ್ತು.
2022ರ ಅಕ್ಟೋಬರ್ 15ರಂದು ದೂರುದಾರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, “ಫಕೀರಪ್ಪ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ” ಎಂದು ಆರೋಪಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ತನಿಖೆ ನಡೆಸಿ, ಐಪಿಸಿ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತ ನೋವು), 417 (ವಂಚನೆ), 506 (ಜೀವ ಬೆದರಿಕೆ) ಅಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಫಕೀರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ದೋಷಾರೋಪ ಮತ್ತು ವಿಚಾರಣೆ ರದ್ದತಿಗೆ ಮನವಿ ಮಾಡಿದ್ದರು.
ದೂರುದಾರೆ 2012ರಲ್ಲಿ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತಿಯೊಂದಿಗೆ ಅನ್ನೋನ್ಯತೆ ಇಲ್ಲದಿದ್ದರೂ, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ಮದುವೆಯಾಗದ ಸ್ಥಿತಿಯಲ್ಲಿಲ್ಲ. ಆದ್ದರಿಂದ “ಮದುವೆಯಾಗುತ್ತೇನೆ” ಎಂಬ ಭರವಸೆಯೇ ಅಸಂಭವ ಎಂದು ಹೇಳಿದೆ.
“3 ವರ್ಷಗಳ ಕಾಲ ಇಬ್ಬರ ನಡುವೆ ಸಮ್ಮತಿಯ ಸಂಬಂಧ ಹೊಂದಿದ್ದರು. ಪ್ರತಿಯೊಂದು ಮುರಿದ ಭರವಸೆಯೂ ಸುಳ್ಳು ಭರವಸೆಯಲ್ಲ. ಪ್ರತಿಯೊಂದು ವಿಫಲ ಸಂಬಂಧವನ್ನೂ ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ,” ಎಂದು ಪೀಠ ಸ್ಪಷ್ಟಪಡಿಸಿದೆ.
ತೀರ್ಪಿನಲ್ಲಿ ಹೈಕೋರ್ಟ್ ಸುಪ್ರೀಂ ಕೋರ್ಟ್ ನೀಡಿದ ಅನೇಕ ತೀರ್ಪುಗಳನ್ನು ಉಲ್ಲೇಖಿಸಿತು. “ಸಮ್ಮತಿಯ ಸಂಬಂಧ ಮತ್ತು ಅತ್ಯಾಚಾರ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಸಮ್ಮತಿಯಲ್ಲಿ ನಿರ್ಮಿತವಾದ ದೈಹಿಕ ಸಂಬಂಧವನ್ನು ನಂತರ ‘ಅತ್ಯಾಚಾರ’ ಎಂದು ಪರಿವರ್ತಿಸಲಾಗುವುದಿಲ್ಲ” ಎಂಬ ನಯೀಮ್ ಅಹ್ಮದ್ ಹಾಗೂ ಅಮೋಲ್ ಭಗವಾನ್ ನೇಹುಲ್ ಪ್ರಕರಣಗಳ ಉಲ್ಲೇಖ ಹೈಕೋರ್ಟ್ ನೀಡಿದೆ.
ನ್ಯಾಯಾಲಯದ ಎಚ್ಚರಿಕೆ
ಈ ತೀರ್ಪು ಕೇವಲ ಒಂದು ಪ್ರಕರಣಕ್ಕೆ ಸೀಮಿತವಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಹಲವು ಬಾರಿ ಅತ್ಯಾಚಾರ vs ಸಮ್ಮತಿ ಸಂಬಂಧ, ಸುಳ್ಳು ಭರವಸೆ vs ಭರವಸೆ ಉಲ್ಲಂಘನೆ ನಡುವಿನ ವ್ಯತ್ಯಾಸವನ್ನು ವಿವರಿಸಿವೆ. ವಿವಾಹದ ಭರವಸೆ ಉಲ್ಲಂಘನೆಯಾದರೂ, ಸಂಬಂಧ ಸಮ್ಮತಿಯದ್ದಿದ್ದರೆ ಅದು ಅತ್ಯಾಚಾರವಲ್ಲ ಎಂಬ ನಿಲುವು ಸ್ಪಷ್ಟವಾಗಿದೆ.
ಹೈಕೋರ್ಟ್ ಎಚ್ಚರಿಕೆ ನೀಡಿದೆ
“ಈ ರೀತಿಯ ಕೇಸ್‌ಗಳನ್ನು ಮುಂದುವರಿಸಿದರೆ, ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ.” ಆದ್ದರಿಂದ ಫಕೀರಪ್ಪ ವಿರುದ್ಧದ ದೋಷಾರೋಪ ಪಟ್ಟಿ ಮತ್ತು 53ನೇ ACMM ನ್ಯಾಯಾಲಯದ ವಿಚಾರಣೆ ಸಂಪೂರ್ಣ ರದ್ದುಗೊಂಡಿದೆ.
