ವಿಜಯಪುರ: ಕರ್ನಾಟಕ ರಾಜ್ಯವು ಭೀಕರ ಬೇಸಿಗೆ ತಾಪಕ್ಕೆ ತತ್ತರಿಸುತ್ತಿದ್ದು, ಉರಿ ಬಿಸಿಲಿನ ಪರಿಣಾಮ ಈಗ ಜೀವಹಾನಿಗೂ ಕಾರಣವಾಗುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದೀಗ ವಿಜಯಪುರ ಜಿಲ್ಲೆಯಲ್ಲಿ ತೀವ್ರ ತಾಪಮಾನಕ್ಕೆ (ಹೀಟ್ ಸ್ಟ್ರೋಕ್‌ಗೆ) 15 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ 15 ವರ್ಷದ ಬಾಲಕ ಶ್ರೀಶೈಲ ಬಿರಾದಾರ ಬಿಸಿಲಿನ ಬೇಗೆಗೆ ಬಲಿಯಾದ ಘಟನೆ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಸಮಯದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಬಾಲಕ ತೀವ್ರ ಬಿಸಿಲಿನ ಹೊಡೆತಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ರಾಯಚೂರು ಮತ್ತು ಬೆಳಗಾವಿಯಲ್ಲೂ ಬಿಸಿಲಿಗೆ ಸಾವು
ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ಕಾಟ ಹೆಚ್ಚುತ್ತಿದ್ದು, ಇನ್ನೂ ಕೆಲವು ಸಾವುಗಳೂ ವರದಿಯಾಗಿವೆ. ರಾಯಚೂರು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳಿದ್ದ ಹುಸೇನಪ್ಪ (45) ಎಂಬ ಕಾರ್ಮಿಕನು ಕೆಲಸ ಮಾಡುವಾಗಲೇ ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇದೇ ರೀತಿ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ಬಳ್ಳಾರಿ (35) ಅವರು ಕಳೆದ ವಾರ ಬಿಸಿಲಿನ ಝಳಕ್ಕೆ ಬಲಿಯಾಗಿದ್ದರು.
ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ಘೋಷಿಸಿದ್ದು, ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಹೀಟ್‌ಸ್ಟ್ರೋಕ್ ಚಿಕಿತ್ಸೆಗೆ ವಿಶೇಷ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ವೈದ್ಯರು ಸಾರ್ವಜನಿಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ.
ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸಿಕೊಳ್ಳಬೇಕು. ಈ ಸಮಯದಲ್ಲಿ ಸೂರ್ಯನ ಕಿರಣಗಳು ಅತೀ ತೀವ್ರವಾಗಿದ್ದು, ದೇಹದ ಉಷ್ಣತೆಯನ್ನು ಹೆಚ್ಚಿಸಿ ಹೀಟ್‌ಸ್ಟ್ರೋಕ್‌ಗೆ ಕಾರಣವಾಗಬಹುದು. ಮಕ್ಕಳು ಆಟವಾಡುವುದನ್ನು ಈ ಸಮಯದಲ್ಲಿ ನಿಲ್ಲಿಸುವಂತೆ ಪೋಷಕರು ಗಮನಹರಿಸಬೇಕು.
