ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಲ್ಲಿ 37ಕ್ಕೂ ಹೆಚ್ಚು ಜನರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಈ ಸಾವಿನ ಸರಣಿ ನಿಲ್ಲುವ ಯಾವುದೇ ಲಕ್ಷಣ ಕಾಣಿಸದಿರುವುದು ಜನರಲ್ಲಿ ಭಯವನ್ನು ಹುಟ್ಟಿಸಿದೆ. ಇಂದು ಒಂದೇ ದಿನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 8 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಯಾದಗಿರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಘಟನೆಗಳು ನಡೆದಿವೆ.
ಒಂದೇ ದಿನದಲ್ಲಿ 8 ಜನರ ಸಾವು
ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತದ ಘಟನೆಗಳು ಜನರಲ್ಲಿ ಆತಂಕವನ್ನುಂಟು ಮಾಡಿವೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರವು ಸಮಿತಿಯೊಂದನ್ನು ರಚಿಸಿತ್ತು, ಮತ್ತು ಆ ಸಮಿತಿಯ ವರದಿಯೂ ಸಲ್ಲಿಕೆಯಾಗಿದೆ. ಜನರು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಈ ದುರಂತಗಳು ಕಡಿಮೆಯಾಗುತ್ತಿಲ್ಲ. ಇಂದು ಒಂದೇ ದಿನದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 8 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೃದಯಾಘಾತ ಎಲ್ಲೆಲ್ಲಿ ?
ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಹೌಸಿಂಗ್‌ಬೋರ್ಡ್ ಕಾಲೋನಿಯ 52 ವರ್ಷದ ಶಿವಕುಮಾರ್, ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು, ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ, ಮಂಗಳೂರಿನಿಂದ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದ 57 ವರ್ಷದ ರಂಗನಾಥ್, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕಾರಿನಲ್ಲೇ ಹೃದಯಾಘಾತಕ್ಕೊಳಗಾಗಿ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ.
ಹಾಸನದ ಹೊಳೆನರಸೀಪುರ ತಾಲೂಕಿನ ಕೊಂಗಲಬೀಡು ಗ್ರಾಮದ 44 ವರ್ಷದ ಆನಂದ್, ಮಲಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಸಾವನ್ನಪ್ಪಿದ್ದಾರೆ. ಯಾದಗಿರಿ ತಾಲೂಕಿನ ಶೆಟ್ಟಿಕೇರಾ ಗ್ರಾಮದ 44 ವರ್ಷದ ಹಳ್ಳೆಪ್ಪ ಪೂಜಾರಿ, ಮೊಹರಂ ಅಗ್ನಿಕುಂಡ ತುಳಿದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 53 ವರ್ಷದ ನಜೀರಮ್ಮ, ಬೆಳಗ್ಗೆ ಏಕಾಏಕಿ ಕುಸಿದು ಬಿದ್ದು, ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಗ್ರಾಮದ 54 ವರ್ಷದ ಗಂಗಾಧರಪ್ಪ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದ 29 ವರ್ಷದ ಮೀನಾಕ್ಷಿ ಮತ್ತು ಬಿ.ಹೊಸಳ್ಳಿ ಗ್ರಾಮದ 75 ವರ್ಷದ ಸುಮಿತ್ರೆಗೌಡ ಸಹ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ತಡೆಗಟ್ಟುವ ಕ್ರಮಗಳೇನು?
ಹೃದಯಾಘಾತದ ಏರಿಕೆಯು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಆರೋಗ್ಯ ತಪಾಸಣೆ, ಒತ್ತಡ ನಿರ್ವಹಣೆ, ಸಮತೋಲನ ಆಹಾರ, ಮತ್ತು ನಿಯಮಿತ ವ್ಯಾಯಾಮವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.