ಬೆಂಗಳೂರು, ಅಕ್ಟೋಬರ್ 07: ಮಾಜಿ ಪ್ರಧಾನಿ ಹಾಗೂ ಜನತಾದಳ (ಜಾತ್ಯತೀತ) ನೇತಾರ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ತಂಡದ ನಿಗಾ ವೀಕ್ಷಣೆಯಲ್ಲಿರುವ ದೇವೇಗೌಡ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ದೇವೇಗೌಡರ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದೇವೇಗೌಡ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನೂ ಅಧಿಕೃತ ವಿವರ ಹೊರಬಿದ್ದಿಲ್ಲ. ಆದರೆ, ಅವರ ಕುಟುಂಬ ಅಥವಾ ಆಸ್ಪತ್ರೆಯಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿ ಬಿಡುಗಡೆಯಾಗುವ ಸಾಧ್ಯತೆ ಇದೆ.92 ವರ್ಷ ವಯಸ್ಸಿನ ಹಿರಿಯ ರಾಜನೇತೃ ಅವರ ಆರೋಗ್ಯದ ಬಗ್ಗೆ ರಾಜಕೀಯ ಮತ್ತು ಸಾರ್ವಜನಿಕ ವಲಯಗಳಲ್ಲಿ ಗಂಭೀರ ಕಾಳಜಿ ವ್ಯಕ್ತವಾಗಿದೆ.
ಇದು ದೇವೇಗೌಡ ಅವರು ಮೊದಲ ಬಾರಿಗೆ ಆರೋಗ್ಯ ಸಮಸ್ಯೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದಲ್ಲ. ಕಳೆದ ವರ್ಷ ಫೆಬ್ರವರಿ 15ರಂದು ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಇದೇ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಸಮಯದಲ್ಲಿ ಅವರು ಚಿಕಿತ್ಸೆಗೆ ಚೆನ್ನಾಗಿ ಪ್ರತಿಕ್ರಿಯಿಸಿ, ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ವಯೋಸಹಜ ಸಮಸ್ಯೆಗಳಿಂದಾಗಿ ದೇವೇಗೌಡ ಅವರ ಆರೋಗ್ಯದ ಕಡೆಗೆ ಸದಾ ವಿಶೇಷ ಲಕ್ಷ್ಯ ಕೊಡಬೇಕಾಗುತ್ತದೆ.
ತಮ್ಮ 90 ರ ದಶಕದಲ್ಲೂ ದೇವೇಗೌಡ ಅವರ ರಾಜಕೀಯ ಸಕ್ರಿಯತೆ ಮತ್ತು ಸಾಮಾಜಿಕ ಬದ್ಧತೆ ಅಪ್ರತಿಮವಾಗಿದೆ. ಅವರು ಸದ್ಯ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ದಿನಗಳಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಅವರು ಪಕ್ಷದ ಮೈತ್ರಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮಾತ್ರವಲ್ಲದೆ, ಹಲವಾರು ಚುನಾವಣಾ ಸಭೆಗಳಲ್ಲಿ ಭಾಗವಹಿಸಿ ಓಡಾಡಿದ್ದರು.
ಇತ್ತೀಚೆಗೆ, ಹಾಸನ ನಡೆದ ಗಣೇಶ ಮೆರವಣಿಗೆಯಲ್ಲಿ ನಡೆದ ದುರಂತದಲ್ಲಿ ಸಅವನ್ನಪ್ಪಿದ ಸಂತ್ರಸ್ಥರ ಕುಟುಂಬಗಳನ್ನು ದೇವೇಗೌಡರು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಸಂಸತ್ ಕಾರ್ಯಕಲಾಪಗಳಲ್ಲಿ ನಿಯಮಿತವಾಗಿ ಭಾಗವಹಿಸಿ, ಕರ್ನಾಟಕದ ಹಿತಾಸಕ್ತಿಗಳ ಪರವಾಗಿ ಧ್ವನಿ ಎತ್ತುವುದು ಅವರ ನಿತ್ಯದ ಕಾರ್ಯಕ್ರಮವಾಗಿದೆ.