ಹಾವೇರಿ: ಹಾವೇರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹಸುಗೂಸಿನ ತಲೆಗೆ ಬ್ಲೇಡ್ ತಗುಲಿದ ಆಘಾತಕಾರಿ ಘಟನೆ ನಡೆದಿದೆ. ರಾಣೇಬೆನ್ನೂರು ಮೂಲದ ಮಹಮ್ಮದ್ ಮುಜಾಹೀದ್ ಅವರ ಪತ್ನಿ ಬೀಬಿಅಪ್ಸ್ ಅವರು ತಮ್ಮ ಮೊದಲ ಹೆರಿಗೆಗಾಗಿ ನಿನ್ನೆ ಬೆಳಗ್ಗೆ ಹಾವೇರಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರು, ಸಹಜ ಹೆರಿಗೆ (Normal Delivery) ಸಾಧ್ಯವಿಲ್ಲ, ಸಿಸೇರಿಯನ್ (C-Section) ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದರು. ಬಳಿಕ ಕುಟುಂಬಸ್ಥರು ಶಸ್ತ್ರ ಚಿಕಿತ್ಸೆಗೆ ಒಪ್ಪಿದ್ದರು.
ಆಪರೇಷನ್ ಥಿಯೇಟರ್‌ಗೆ ಕರೆದೊಯ್ದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವ ವೇಳೆ ಅತಿಯಾದ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿಸೇರಿಯನ್ ಮಾಡುವಾಗ ಬಳಸುವ ಸರ್ಜಿಕಲ್ ಬ್ಲೇಡ್ ನವಜಾತ ಶಿಶುವಿನ ತಲೆಗೆ ತಗುಲಿದೆ. ಇದರಿಂದಾಗಿ ಜನಿಸಿದ ಕೆಲವೇ ಕ್ಷಣಗಳಲ್ಲಿ ಮಗುವಿನ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ತಾಯಿಯ ಗರ್ಭದಿಂದ ಹೊರಬರುವಾಗಲೇ ಮಗು ತೀವ್ರ ಗಾಯದೊಂದಿಗೆ ಜನಿಸಿದ್ದು ನೋಡಿ ಕುಟುಂಬಸ್ಥರು ಭಯಭಿತರಾಗಿದ್ದಾರೆ.
ವೈದ್ಯರ ಎಡವಟ್ಟಿನಿಂದ ಗಾಯಗೊಂಡ ಶಿಶುವಿನ ಸ್ಥಿತಿ ಆತಂಕಕಾರಿಯಾದ ಹಿನ್ನೆಲೆಯಲ್ಲಿ, ತಕ್ಷಣವೇ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲಾಗಿದೆ. ವೈದ್ಯರ ಈ ಬೇಜವಾಬ್ದಾರಿಯುತ ನಡೆಯ ವಿರುದ್ಧ ಬೀಬಿಅಪ್ಸ್ ಅವರ ಕುಟುಂಬಸ್ಥರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಮೊದಲ ಮಗು ಹುಟ್ಟಿದ ಖುಷಿಯಲ್ಲಿರಬೇಕಾದ ನಾವು, ಈಗ ಮಗುವಿನ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದೇವೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ರೈಲು ಹಳಿ ದಾಟುವಾಗ ಗೂಡ್ಸ್ ರೈಲು ಡಿಕ್ಕಿ ಯುವಕ ಸಾವು
ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಬದಲಿಸಲು ಅಡ್ಡ ಹಾದಿ ಹಿಡಿದು ರೈಲು ಹಳಿ ದಾಟುತ್ತಿದ್ದ ಯುವಕನೊಬ್ಬ ಗೂಡ್ಸ್ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗೋಣಿಮಾಗೂರು ಸಮೀಪದ ಸೋಮವಾರಪುರದ ನಿವಾಸಿ ರಾಜೇಶ್ (35) ಎಂದು ಗುರುತಿಸಲಾಗಿದೆ. ಇವರು ಸೋಮವಾರಪುರದ ಚೆನ್ನಯ್ಯ ಎಂಬುವವರ ಪುತ್ರ ಎಂದು ತಿಳಿದುಬಂದಿದೆ. ರಾಜೇಶ್ ಅವರ ಅಂಗಿಯ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ಆಧರಿಸಿ ಪೊಲೀಸರು ಗುರುತು ಪತ್ತೆಹಚ್ಚಿದ್ದಾರೆ.
ರಾಜೇಶ್ ಅವರು ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಇಳಿದು, ಮೇಲ್ಸೇತುವೆಯನ್ನು (Foot Overbridge) ಬಳಸುವ ಬದಲಿಗೆ ಅಡ್ಡ ಹಾದಿಯ ಮೂಲಕ ಹಳಿ ದಾಟಿ ಮತ್ತೊಂದು ಪ್ಲಾಟ್‌ಫಾರ್ಮ್ ಹತ್ತಲು ಪ್ರಯತ್ನಿಸಿದ್ದಾರೆ. ಈ ವೇಳೆ ಅದೇ ಹಳಿಯಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲನ್ನು ಗಮನಿಸದ ರಾಜೇಶ್ ಅವರಿಗೆ ರೈಲು ಡಿಕ್ಕಿ ಹೊಡೆದಿದೆ. ಹೀಗಾಗಿ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳಲ್ಲಿ ಹಳಿ ದಾಟದಂತೆ ಮತ್ತು ಮೇಲ್ಸೇತುವೆ ಬಳಸುವಂತೆ ಪದೇ ಪದೇ ಸೂಚನೆ ನೀಡಿದ್ದರೂ ಅವಸರವಾಗಿ ರಾಜೇಶ್ ಹಳಿ ದಾಟಲು ಮುಂದಾಗಿದ್ದಾನೆ ಇದರಿಂದ ಈ ದುರ್ಘಟನೆ ನಡೆದಿದೆ.





