ಹಾಸನ: ಹಾಸನಾಂಬೆ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಇಂದು ಮುಕ್ತಾಯಗೊಂಡಿದೆ. ಈ ಬಾರಿಯ ಜಾತ್ರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಈ ಬಾರಿ 26.13 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಇದು ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ 26 ಲಕ್ಷ ಜನ ದೇವಿಯ ದರ್ಶನ ಪಡೆದಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದರು.
ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 21.82 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಸಚಿವರು ತಿಳಿಸಿದರು. ಹುಂಡಿ ಎಣಿಕೆ ನಂತರ ಒಟ್ಟಾರೆ 25 ಕೋಟಿ ರೂಪಾಯಿ ಆದಾಯ ಬರುವ ಸಾಧ್ಯತೆ ಇದೆ. ಕಳೆದ ವರ್ಷ 17.47 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು ಮತ್ತು ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 9.68 ಕೋಟಿ ಆದಾಯ ಬಂದಿತ್ತು.
ಈ ಬಾರಿಯ ಹಾಸನಾಂಬೆ ದರ್ಶನ ಅತ್ಯಂತ ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು, ಎನ್.ಸಿ.ಸಿ. ಹಾಗೂ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಲಾಗಿದೆ. ಸ್ಥಳೀಯರಿಗೂ ಸಹ ಈ ಬಾರಿ ನಿನ್ನೆ ಸಂಜೆ ದರ್ಶನಕ್ಕೆ ವಿಶೇಷ ಅವಕಾಶ ಮಾಡಿಕೊಡಲಾಗಿತ್ತು.
ಈ ಸಲ ಜನಸಾಮಾನ್ಯರು ಯಾವುದೇ ನೂಕು ನುಗ್ಗಲು ಇಲ್ಲದೆ ಸರಳ, ಸುಲಲಿತವಾಗಿ ದರ್ಶನ ಆಗಿರುವುದು ಅತೀವ ಸಂತಸ ತಂದುಕೊಟ್ಟಿದೆ. ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಉತ್ತಮ ರೀತಿಯಲ್ಲಿ ಒದಗಿಸಲಾಗಿತ್ತು.
ಮುಂದಿನ ವರ್ಷದ ಹಾಸನಾಂಬೆ ಜಾತ್ರೆ ಅಕ್ಟೋಬರ್ 29 ರಂದು ಬಾಗಿಲು ತೆರೆದು ನವೆಂಬರ್ 11 ರಂದು ಬಾಗಿಲು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕಳೆದ ಬಾರಿ ಆಗಿದ್ದ ಅವ್ಯವಸ್ಥೆ ಸರಿಪಡಿಸಿದ್ದು, ಈ ಬಾರಿ ಅತ್ಯಂತ ಯಶಸ್ವಿಯಾಗಿ ಜಾತ್ರಾ ಮಹೋತ್ಸವ ನಡೆದಿದೆ. ಉತ್ತಮ ಆದಾಯ ಬಂದಿದೆ. ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕರು ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಮಹಾನಗರಪಾಲಿಕೆ ಮೇಯರ್ ಗಿರೀಶ್ ಚೆನ್ನವೀರಪ್ಪ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.