ಶಾಸಕ ಹರೀಶ್‌ಗೌಡ ಪತ್ನಿಗೆ ಅಶ್ಲೀಲ ಕಮೆಂಟ್‌ ಪ್ರಕರಣ: ಜಿ.ಟಿ ದೇವೇಗೌಡರ ಅಳಿಯನಿಂದಲೇ ಕೃತ್ಯ

ಇರ್ತೀರಾ (1)

ಮೈಸೂರು, ಜುಲೈ 14: ಜೆಡಿಎಸ್ (JDS) ಹಿರಿಯ ನಾಯಕ, ಮಾಜಿ ಸಚಿವ ಮತ್ತು ಹುಣಸೂರು ಕ್ಷೇತ್ರದ ಪ್ರಬಲ ಮುಖಂಡರಾದ ಜಿ.ಟಿ. ದೇವೇಗೌಡ (GT Devegowda) ಅವರ ಕುಟುಂಬದಲ್ಲಿ ಆಘಾತಕಾರಿ ಮತ್ತು ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಜಿ.ಟಿ. ದೇವೇಗೌಡ ಅವರ ಸೊಸೆ ಹಾಗೂ ಹುಣಸೂರು ಕ್ಷೇತ್ರದ ಹಾಲಿ ಶಾಸಕ ಜಿ.ಡಿ. ಹರೀಶ್ ಗೌಡ (G D Harish Gowda) ಅವರ ಪತ್ನಿ ವರ್ಷಾ ಗೌಡ ಅವರಿಗೆ ಕೆಟ್ಟ, ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಆರೋಪಿ ಸ್ವತಃ ತಮ್ಮ ಕುಟುಂಬದ ಒಳಗಿನವರೇ ಎಂದು ತಿಳಿದುಬಂದಿದೆ. 

ಪ್ರಕರಣದ ಹಿನ್ನೆಲೆ

ವರ್ಷಾ ಗೌಡ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಮಾಹಿತಿಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ಅವರ ಪೋಸ್ಟ್ ಗಳಿಗೆ ಅತ್ಯಂತ ಕೆಟ್ಟ, ಅಶ್ಲೀಲ ಮತ್ತು ನಿಂದನಾತ್ಮಕ ಕಾಮೆಂಟ್‌ಗಳು ಬರಲಾರಂಭಿಸಿದವು. ಇದರಿಂದ ಮಾನಸಿಕವಾಗಿ ತೀವ್ರ ತೊಂದರೆಗೆ ಒಳಗಾದ ವರ್ಷಾ ಗೌಡ ಅವರು ಕೂಡಲೇ ಈ ಬಗ್ಗೆ ಮೈಸೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದರು.

ಪೊಲೀಸ್ ತನಿಖೆಯಲ್ಲಿ ಹೊರಬಿದ್ದ ಅಚ್ಚರಿಯ ಸತ್ಯ

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿ ಬಳಸುತ್ತಿದ್ದ ಐಪಿ ವಿಳಾಸ, ಫೋನ್ ಸಂಖ್ಯೆ, ಇಮೇಲ್ ಐಡಿ ಮತ್ತು ಇತರೆ ಡಿಜಿಟಲ್ ಅಂಶಗಳನ್ನು ಪರಿಶೀಲಿಸಿದಾಗ ಅಚ್ಚರಿ ಅಂಶವೊಂದು ಬೆಳಕಿಗೆ ಬಂದಿದೆ. ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌‌ಗಳನ್ನು ಮಾಡಿದ್ದ ಆರೋಪಿ ಬೇರಾರೂ ಅಲ್ಲ, ಸ್ವತಃ ಜಿ.ಟಿ. ದೇವೇಗೌಡ ಅವರ ಹಿರಿಯ ಅಳಿಯ (ಮಗಳ ಗಂಡ) ಎಂದು ದೃಢಪಟ್ಟಿತು.

ಕುಟುಂಬದ ಹಿರಿಯರಾದ ಜಿ.ಟಿ. ದೇವೇಗೌಡ ಅವರಿಗೆ ಈ ವಿಚಾರ ತಿಳಿದ ಕೂಡಲೇ ತೀವ್ರ ಆಘಾತವುಂಟಾಗಿದ್ದು, ಅವರು ಅತ್ಯಂತ ಮನಸ್ತಾಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.. ಇಡೀ ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಬೆಂಬಲಿಗರು ಈ ಘಟನೆಯಿಂದ ತೀವ್ರ ನೊಂದುಕೊಂಡಿದ್ದಾರೆ.

ಕಾನೂನು ಕ್ರಮ

ವರ್ಷಾ ಗೌಡ ಅವರ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಸೈಬರ್ ಕ್ರೈಂ ಕಾಯ್ದೆ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸಂಬಂಧಿಸಿದ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಕರೆಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version