ರಾಮನಗರ, ಜುಲೈ 14: ಬಿಡದಿ ಟೌನ್ಶಿಪ್ ಯೋಜನೆಗೆ (Bidadi Township Project) ಸಂಬಂಧಿಸಿದಂತೆ ಜಂಟಿ ಭೂಮಾಪನ (JMC) ಕಾರ್ಯದ ವೇಳೆ ಉಂಟಾದ ಜಟಾಪಟಿ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಡಲಹಳ್ಳಿಯಲ್ಲಿ ಜೆಎಂಸಿ ಸರ್ವೆಗೆ ತಡೆಯೊಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಘಟನೆಯ ಹಿನ್ನೆಲೆ
ಬಿಡದಿ ಟೌನ್ಶಿಪ್ ಯೋಜನೆಯ ವ್ಯಾಪ್ತಿಗೆ ಬರುವ ಮಂಡಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೆಎಂಸಿ ಸರ್ವೆ ನಡೆಸಲು ಅಧಿಕಾರಿಗಳು ಆಗಮಿಸಿದಾಗ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ವೆಗೆ ಅಡ್ಡಿಪಡಿಸಿದ ರೈತರು ಅಧಿಕಾರಿಗಳನ್ನು ಅಟ್ಟಾಡಿಸಿ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಸರ್ಕಾರಿ ವಾಹನಗಳ ಮೇಲೆಯೂ ಹಲ್ಲೆ ಮಾಡಿರುವುದಾಗಿ ಕಂದಾಯ ಅಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಯ ಬಗ್ಗೆ ಕಂದಾಯ ಅಧಿಕಾರಿಗಳು ಬಿಡದಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದು, ಪೊಲೀಸರು ಅದರ ಅನ್ವಯ ಎರಡು ಪ್ರತ್ಯೇಕ ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ದಾಖಲಾದ ಪ್ರಕರಣಗಳಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ, ಅಧಿಕಾರಿಗಳ ಮೇಲೆ ಹಲ್ಲೆ, ಸರ್ಕಾರಿ ವಾಹನಗಳಿಗೆ ಹಾನಿ ಮತ್ತು ಭಯಭೀತಗೊಳಿಸುವ ಆರೋಪಗಳು ಸೇರಿವೆ.
ಬಿಡದಿ ಟೌನ್ಶಿಪ್ ಯೋಜನೆಯ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳಲ್ಲಿ ಇಂದೂ ಕೂಡ ರೈತರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲಾಡಳಿತ ಅಥವಾ ಅಧಿಕಾರಿಗಳು ಮತ್ತೆ ಜೆಎಂಸಿ ಸರ್ವೆಯನ್ನು ಮುಂದುವರಿಸಲು ಮುಂದಾದರೆ, ಸ್ಥಳದಲ್ಲೇ ತಡೆದು ತೀವ್ರ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಮತ್ತು ಸ್ಥಳೀಯರು ಸಿದ್ಧರಾಗಿದ್ದಾರೆ.
ಇಂದು ಭಾರೀ ಪೊಲೀಸ್ ಬಂದೋಬಸ್ತ್ ನಲ್ಲಿ ಸರ್ವೆ ಕಾರ್ಯ ಮುಂದುವರಿದಿದೆ. ನಿನ್ನೆ ಸ್ಥಳಕ್ಕೆ ಐಜಿ ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಜೊತೆಗೆ ಸರ್ವೆ ಬಗ್ಗೆ ಮಾಹಿತಿ ಪಡೆದಿರುವ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಅವರು ಇಂದು ಮತ್ತೆ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಸ್ಥಳದಲ್ಲಿ ಇಂದು ಕೂಡ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, “ಹಿಂಬರ ಕೊಡೆವವರೆಗೂ ಸರ್ವೆ ಮಾಡಲು ಬಿಡಲ್ಲ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶಾಸಕರು ಮತ್ತು ಜಿಲ್ಲಾಧಿಕಾರಿ ಬರಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಸಮಸ್ಯೆ ಇತ್ಯರ್ಥಗೊಳ್ಳುವವರೆಗೂ ಯಾವುದೇ ಯೋಚನೆ ಅಥವಾ ಸರ್ವೆಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
