ಮೈಸೂರು: ರಾಜ್ಯದ ಯಜಮಾನಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಹಣ ನೀಡಲು ವಿಳಂಬವಾಗುತ್ತಿತ್ತು, ಇನ್ಮುಂದೆ ಮೂರು ತಿಂಗಳಿಗೊಮ್ಮೆ ಹಣ ವಿತರಿಸದೆ, ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಮೂರನೇ ಆಷಾಢ ಶುಕ್ರವಾರದಂದು (ಜುಲೈ 11) ಚಾಮುಂಡಿ ಬೆಟ್ಟದಲ್ಲಿ ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ತಾವೇ ಸಿಎಂ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಯಾವುದೇ ಅವಕಾಶವಿಲ್ಲ. ಈ ಬಗ್ಗೆ ಪದೇ ಪದೇ ಮಾತನಾಡುವುದು ಸರಿಯಲ್ಲ,” ಎಂದರು. “ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ರಾಷ್ಟ್ರೀಯ ಪಕ್ಷದಲ್ಲಿ ಹೈಕಮಾಂಡ್‌ನ ತೀರ್ಮಾನವೇ ಅಂತಿಮವಾಗಿರುತ್ತದೆ,” ಎಂದು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮೀ ಯೋಜನೆಯ ಹಣ ಸಕಾಲಿಕ ವಿತರಣೆ
ಗೃಹಲಕ್ಷ್ಮೀ ಯೋಜನೆಯಡಿ ಮೂರು ತಿಂಗಳಿಗೊಮ್ಮೆ ಹಣ ವಿತರಿಸಲಾಗುತ್ತಿದೆ ಎಂಬ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, “ನಾವು ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದ್ದೇವೆ. ಮೇ ತಿಂಗಳವರೆಗೆ ಹಣ ಜಮಾ ಆಗಿದೆ, ಮತ್ತು ಜೂನ್ ತಿಂಗಳ ಹಣದ ಪ್ರಕ್ರಿಯೆ ನಡೆಯುತ್ತಿದೆ. ಹಣ ವಿತರಣೆಗೆ ಯಾವುದೇ ತೊಡಕುಗಳಿಲ್ಲ. ರೇವಣ್ಣ ಯಾಕೆ ಆ ರೀತಿಯ ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ,” ಎಂದು ತಿಳಿಸಿದರು.