ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಲು ಮುಂದಾಗಿದೆ. ಮುಂದಿನ ಎರಡು ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಧಿಕೃತ ಅವಕಾಶ ಸಿಗುವ ಸಾಧ್ಯತೆ ಇದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊನೆ ಹಂತದ ತಯಾರಿಯಲ್ಲಿ ತೊಡಗಿದೆ.
ಸರ್ಕಾರದ ಯೋಜನೆಯ ಪ್ರಕಾರ, ಅರ್ಜಿ ಸಲ್ಲಿಸಲು ಸಾಧ್ಯವಾಗದ ಫಲಾನುಭವಿಗಳ ಮನೆಗಳಿಗೆ ಸಹಾಯಕಿಯರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕ ಸಿಬ್ಬಂದಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅವರ ಮೊಬೈಲ್‌ಗಳಲ್ಲಿ ವಿಶೇಷ ಆಪ್ ಇನ್‌ಸ್ಟಾಲ್ ಮಾಡಲಾಗಿದ್ದು, ಇದರ ಮೂಲಕ ಅನಕ್ಷರಸ್ಥರು ಹಾಗೂ ಬಡ ಮಹಿಳೆಯರು ಸುಲಭವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ.
ಅದೇ ವೇಳೆ, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳು ಮತ್ತು ಬ್ರೌಸಿಂಗ್ ಸೆಂಟರ್‌ಗಳ ಮೂಲಕವೂ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗುತ್ತದೆ. ಮರುಅರ್ಜಿಯಲ್ಲಿ ಬಯೋಮೆಟ್ರಿಕ್ ಹಾಗೂ ಫೇಸ್ ರಿಕಗ್ನಿಷನ್ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಆದರೆ ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್‌ಗಳಲ್ಲಿ ಥಂಬ್ ಮಷೀನ್ ವ್ಯವಸ್ಥೆ ಲಭ್ಯವಿಲ್ಲ ಎಂಬ ಮಾಹಿತಿ ಇದೆ. ಈ ಮರು ಪರಿಷ್ಕರಣೆ ಯೋಜನೆ ಏಕೆಂದರೆ ಸರಿಯಾದ ಫಲಾನುಭವಿಗಳಿಗೆ ಸರಿಯಾದ ಹಣ ಸಂದಾಯವಾಗದೇ ಇರುವುದೇ ಈ ಯೋಜನೆ ಪರಿಷ್ಕರಣೆ ಜಾರಿಗೆ ತರುವುದರ ಉದ್ಧೇಶವಾಗಿದೆ.
ಮರು ಅರ್ಜಿಯಲ್ಲಿ ಏನಿರಲಿದೆ?
- ಹೆಸರು, ವಿಳಾಸ ಮತ್ತು ಆಧಾರ್ ಕಾರ್ಡ್ ವಿವರಗಳು
- ಹಿಂದಿನ ಅರ್ಜಿಯ ಮಾಹಿತಿಯ ಪುನರಾವರ್ತಿ
- ರಾಜ್ಯದಲ್ಲಿರುವ ಬ್ಯಾಂಕ್ ಖಾತೆ ವಿವರಗಳನ್ನು ನೀಡುವುದು ಕಡ್ಡಾಯ
- ಜಾತಿ ಪ್ರಮಾಣ ಪತ್ರ ಇಲ್ಲದಿದ್ದರೆ ಸ್ವಘೋಷಿತ ಜಾತಿ ಮಾಹಿತಿ ನೀಡುವ ಅವಕಾಶ
ಯಾರಿಗೆ ಅವಕಾಶ?
- ಮನೆಯ ಯಜಮಾನಿ ಮಹಿಳೆಯರು
- ಈಗಾಗಲೇ ಯೋಜನೆಯ ಫಲಾನುಭವಿಗಳು
- ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು
- BPL ಮತ್ತು APL ಕಾರ್ಡ್ ಹೊಂದಿದ ಮಹಿಳೆಯರು
ಯಾರಿಗೆ ಅವಕಾಶ ಇಲ್ಲ?
- ಮೃತ ಫಲಾನುಭವಿಗಳ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು ನಿಷೇಧ
- ಆದಾಯ ತೆರಿಗೆ ಪಾವತಿಸುವವರು ಹಾಗೂ ಜಿಎಸ್ಟಿ ಫೈಲ್ ಮಾಡುವವರು ಈ ಯೋಜನೆಗೆ ಅರ್ಹರಾಗುವುದಿಲ್ಲ
ಸರ್ಕಾರದ ಈ ಹೊಸ ಕ್ರಮದಿಂದ ಯೋಜನೆ ವ್ಯಾಪ್ತಿ ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದ್ದು, ಅರ್ಜಿ ಪ್ರಕ್ರಿಯೆ ಸುಗಮಗೊಳಿಸಲು ಡಿಜಿಟಲ್ ಹಾಗೂ ಸ್ಥಳೀಯ ಸಹಾಯ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.
