ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿಯಲ್ಲಿ ಫೋಟೊ ತೆಗೆದುಕೊಳ್ಳಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿರುವ ಘೋರ ಘಟನೆ ಇಂದು ಸಂಜೆ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಬ್ಯಾಡರಹಳ್ಳಿ ಮೂಲದ ಈ ಕುಟುಂಬಸ್ಥರು ಮುತ್ತತ್ತಿಯ ಮುತ್ತತ್ತರಾಯನ ದೇಗುಲಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದ ಬಳಿಯೇ ಹರಿಯುವ ಕಾವೇರಿ ನದಿಗಿಳಿದು ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನೆ ಹೇಗೆ ನಡೆಯಿತು?
ಇಂದು ಸಂಜೆ 5 ಗಂಟೆಯ ಸುಮಾರಿಗೆ ಕುಟುಂಬಸ್ಥರು ಕಾವೇರಿ ನದಿ ದಂಡೆಯಲ್ಲಿದ್ದರು. ಫೋಟೊ ತೆಗೆದುಕೊಳ್ಳುವ ಸಲುವಾಗಿ ನದಿಯ ಆಳವಲ್ಲದ ಭಾಗಕ್ಕೆ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ನಿಯಂತ್ರಣ ಕಳೆದುಕೊಂಡು ನದಿಯ ಆಳವಾದ ಭಾಗಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳೀಯರು ಮತ್ತು ಪ್ರವಾಸಿಗರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಿಸಲು ಯತ್ನಿಸಿದರೂ, ನೀರಿನ ರಭಸಕ್ಕೆ ಐವರು ಕೊಚ್ಚಿ ಹೋಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಹಲಗೂರು ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಮೃತರ ವಿವರ
ಮೃತಪಟ್ಟವರನ್ನು ಚೈತ್ರ (20), ಶ್ವೇತಾ (38), ವಿಜಯಮ್ಮ (50), ಪ್ರಿಯಾಂಕ (28) ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚನ್ನಪಟ್ಟಣ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿಗಳಾಗಿದ್ದರು. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನಿದ್ದಾನೆ.
ಅಗ್ನಿಶಾಮಕ ದಳದ ಕಾರ್ಯಾಚರಣೆ
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿ ಮೃತದೇಹಗಳನ್ನು ಹೊರತೆಗೆದರು. ಮೃತರ ಶವಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಎಸ್ಪಿ ಘಟನಾ ಸ್ಥಳಕ್ಕೆ ಭೇಟಿ
ಘಟನೆಯ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ವಿ.ಜೆ. ಶೋಭಾರಾಣಿ ಅವರು ಘಟನಾ ಸ್ಥಳಕ್ಕೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ ಅವರು, ಘಟನೆಯ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
