ಕೆಂಪೇಗೌಡ ಏರ್‌‌ಪೋರ್ಟ್‌ನಲ್ಲಿ ಬೆಲೆಬಾಳುವ ವಜ್ರಾಭರಣ ಕಳವು: ದೂರು ದಾಖಲು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಕುರಿತಾಗಿ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ಅಮೇರಿಕಾಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಲೆಗೇಜ್‌ನಿಂದ ಭಾರಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ

ಬೆಂಗಳೂರು ನಿವಾಸಿಯಾಗಿರುವ ಮಹಿಳೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುದಾಬಿ ಮೂಲಕ ಅಮೇರಿಕಾಗೆ ಪ್ರಯಾಣ ಮಾಡಲು ಬಂದಿದ್ದರು. ಅವರು ಏರ್‌ಪೋರ್ಟ್‌ನಲ್ಲಿ ಲೆಗೇಜ್ ಚೆಕ್-ಇನ್ ಮಾಡಿಸಿ, ಎಲ್ಲ ಅಗತ್ಯ ಭದ್ರತಾ ತಪಾಸಣೆ ಹಾಗೂ ಕ್ಲಿಯರೆನ್ಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವಿಮಾನ ಹತ್ತಿದ್ದರು. ಆದರೆ ಅಬುದಾಬಿ ವಿಮಾನ ನಿಲ್ದಾಣದಲ್ಲಿ ಲೆಗೇಜ್ ಪಡೆಯುವ ವೇಳೆ ಮಹಿಳೆಗೆ ಭಾರೀ ಆಘಾತ ಎದುರಾಗಿದೆ.

ಅಬುದಾಬಿಯಲ್ಲಿ ಲಗೇಜ್ ಕಲೆಕ್ಷನ್ ಕೌಂಟರ್‌ಗೆ ತೆರಳಿ ತಮ್ಮ ಬ್ಯಾಗ್ ತೆರೆಯುತ್ತಿದ್ದಂತೆ, ಒಳಗಿದ್ದ ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಲೆಗೇಜ್‌ನೊಳಗೆ ಇಡಲಾಗಿದ್ದ ಸುಮಾರು 790 ಗ್ರಾಂ ಚಿನ್ನ, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣಗಳು, ಹಾಗೂ 20 ಸಾವಿರ ರೂಪಾಯಿ ಬೆಲೆ ಬಾಳುವ ಔಷಧಿಗಳು ಸಂಪೂರ್ಣವಾಗಿ ಮಿಸ್ಸಿಂಗ್ ಆಗಿರುವುದು ದೃಢಪಟ್ಟಿದೆ. ಲೆಗೇಜ್‌ನ ಹೊರಭಾಗದಲ್ಲಿ ಯಾವುದೇ ದೊಡ್ಡ ಹಾನಿ ಅಥವಾ ಮುರಿತದ ಗುರುತುಗಳು ಕಂಡುಬಂದಿಲ್ಲ ಎನ್ನಲಾಗಿದೆ.

ಈ ಅಘಾತಕಾರಿ ಘಟನೆ ಬಳಿಕ ಮಹಿಳೆ ತಕ್ಷಣವೇ ಸಂಬಂಧಪಟ್ಟ ಏರ್‌ಲೈನ್ಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಆದರೆ ಸ್ಪಷ್ಟ ಉತ್ತರ ದೊರೆಯದ ಹಿನ್ನೆಲೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಲೆಗೇಜ್ ಬೆಂಗಳೂರು ಏರ್‌ಪೋರ್ಟ್‌ನಿಂದ ಹೊರಟ ನಂತರ ಅಬುದಾಬಿಗೆ ತಲುಪುವವರೆಗಿನ ಮಧ್ಯಂತರದಲ್ಲಿ ಕಳವು ಸಂಭವಿಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಲೆಗೇಜ್ ಹ್ಯಾಂಡ್ಲಿಂಗ್ ಸಿಬ್ಬಂದಿ, ಕಾರ್ಗೋ ವಿಭಾಗ, ಸಿಸಿಟಿವಿ ದೃಶ್ಯಾವಳಿ ಹಾಗೂ ಏರ್‌ಲೈನ್ಸ್ ಲಾಗ್‌ಗಳನ್ನು ಪರಿಶೀಲಿಸಲಾಗುತ್ತಿದೆ. ವಿಶೇಷವಾಗಿ ಕೆಂಪೇಗೌಡ ವಿಮಾನ ನಿಲ್ದಾಣದ ಒಳಭಾಗದಲ್ಲಿ ಲೆಗೇಜ್ ಸಾಗಣೆ ವೇಳೆ ಯಾವುದೇ ಅಕ್ರಮ ನಡೆದಿದೆಯೇ ಎಂಬುದರ ಮೇಲೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ..

ಪ್ರಕರಣದ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರು ಪತ್ತೆಯಾದ ಬಳಿಕ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

 

 

 

 

 

Exit mobile version