ನಕಲಿ ಔಷಧಿ ಮಾಫಿಯಾಗೆ ಬಿಗ್ ಶಾಕ್; 15 ಫಾರ್ಮಸಿಗಳಿಗೂ ನೋಟಿಸ್..ಲೈಸನ್ಸ್ ರದ್ದು

Untitled design 2026 09 20T175452.311

ಬೆಂಗಳೂರು: ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಕಲಿ ಔಷಧಿ ಮಾಫಿಯಾ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ನಕಲಿ ಔಷಧಗಳ ಸರಬರಾಜಿನ ಕುರಿತು ದೂರುಗಳು ಕೇಳಿಬಂದ ಬೆನ್ನಲ್ಲೇ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಹಲವು ಹಂತಗಳಲ್ಲಿ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ಫೈಜರ್ ಕಂಪನಿಯ ಔಷಧಗಳ ಸರಬರಾಜಿಗೆ ತಾತ್ಕಾಲಿಕ ತಡೆ ನೀಡಲಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿರುವ ಫಾರ್ಮಸಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಫೈಜರ್ ಕಂಪನಿಯ ಹೆಸರಿನಲ್ಲಿ ನಕಲಿ ಔಷಧಗಳು ಮಾರುಕಟ್ಟೆಗೆ ಬರುತ್ತಿವೆ ಎಂಬ ದೂರುಗಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನಕಲಿ ಔಷಧಗಳ ಸರಬರಾಜಿನ ಮೂಲ, ಅವು ಯಾವ ಮಾರ್ಗದಲ್ಲಿ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ತಲುಪಿವೆ ಮತ್ತು ಈ ಜಾಲದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ನಡುವೆ, ನಕಲಿ ಔಷಧ ಜಾಲಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ವಿವಿಧೆಡೆ 15ಕ್ಕೂ ಹೆಚ್ಚು ಆಸ್ಪತ್ರೆಗಳ ಫಾರ್ಮಸಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ನಿಯಮ ಉಲ್ಲಂಘನೆ ಹಾಗೂ ಅಗತ್ಯ ಮಾನದಂಡಗಳನ್ನು ಪಾಲಿಸದಿರುವುದು ಕಂಡುಬಂದಿರುವ ಫಾರ್ಮಸಿಗಳ ವಿರುದ್ಧ ಪರವಾನಗಿ ರದ್ದುಪಡಿಸುವ ಕ್ರಮವನ್ನೂ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಡಿಸ್ಟ್ರಿಬ್ಯೂಟರ್‌ಗಳು, ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳ ವಿಚಾರಣೆ

ಆಸ್ಪತ್ರೆಗಳಿಗೆ ಕ್ಯಾನ್ಸರ್ ಔಷಧಗಳು, ಜೀವ ರಕ್ಷಕ ಔಷಧಗಳು ಹಾಗೂ ಐಸಿಯುಗಳಲ್ಲಿ ಬಳಸುವ ಇಂಜೆಕ್ಷನ್‌ಗಳನ್ನು ಪೂರೈಸಿದ ಡಿಸ್ಟ್ರಿಬ್ಯೂಟರ್‌ಗಳು ಮತ್ತು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳ ಮೇಲೂ ಅಧಿಕಾರಿಗಳ ಗಮನ ಹರಿದಿದೆ. ಔಷಧಗಳ ಪೂರೈಕೆ ವೇಳೆ ನಿಯಮಗಳನ್ನು ಪಾಲಿಸಲಾಗಿತ್ತೇ? ಅಗತ್ಯ ದಾಖಲೆಗಳು ಹಾಗೂ ಮಾನದಂಡಗಳನ್ನು ಅನುಸರಿಸಲಾಗಿತ್ತೇ? ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.

ನಿಯಮ ಉಲ್ಲಂಘನೆ ಸಾಬೀತಾದಲ್ಲಿ ಆಸ್ಪತ್ರೆಗಳ ಫಾರ್ಮಸಿ ಪರವಾನಗಿ ಮಾತ್ರವಲ್ಲದೆ ಸಂಬಂಧಪಟ್ಟ ಡಿಸ್ಟ್ರಿಬ್ಯೂಟರ್‌ಗಳ ಲೈಸನ್ಸ್ ರದ್ದುಪಡಿಸುವ ಸಾಧ್ಯತೆಯೂ ಇದೆ. ಹೀಗಾಗಿ ಔಷಧ ಪೂರೈಕೆ ಸರಪಳಿಯ ಪ್ರತಿಯೊಂದು ಹಂತವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಔಷಧಗಳ ಗುಣಮಟ್ಟ ಪರೀಕ್ಷೆ

ಇದೇ ವೇಳೆ, ಭಾರಿ ಡಿಸ್ಕೌಂಟ್ ನೀಡಿ ಔಷಧ ಮಾರಾಟ ಮಾಡುತ್ತಿರುವ ಸಂಸ್ಥೆಗಳ ಮೇಲೂ ಎಫ್‌ಡಿಎ ನಿಗಾ ವಹಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಔಷಧಗಳ ಗುಣಮಟ್ಟವನ್ನು ರ್ಯಾಂಡಮ್ ಸ್ಯಾಂಪಲಿಂಗ್ ಮೂಲಕ ಪರೀಕ್ಷಿಸಲು ಇಲಾಖೆ ಮುಂದಾಗಿದೆ. ಔಷಧಗಳ ಗುಣಮಟ್ಟ, ಸಂಯೋಜನೆ ಮತ್ತು ಅವು ನಿಗದಿತ ಮಾನದಂಡಗಳನ್ನು ಪೂರೈಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು, ಜೀವ ರಕ್ಷಕ ಔಷಧಗಳು ಹಾಗೂ ಐಸಿಯುಗಳಲ್ಲಿ ಬಳಸುವ ಇಂಜೆಕ್ಷನ್‌ಗಳ ಗುಣಮಟ್ಟ ಮತ್ತು ಪೂರೈಕೆ ವ್ಯವಸ್ಥೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಆನ್‌ಲೈನ್ ಮೆಡಿಸಿನ್ ಮಾರಾಟಕ್ಕೂ ನಿಗಾ

ಆನ್‌ಲೈನ್ ಮೂಲಕ ಔಷಧಗಳ ಮಾರಾಟ ನಡೆಯುತ್ತಿರುವ ರೀತಿಯ ಬಗ್ಗೆಯೂ ಇಲಾಖೆ ಗಮನ ಹರಿಸಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಔಷಧಗಳನ್ನು ಆರ್ಡರ್ ಮಾಡುವ ಸಂದರ್ಭದಲ್ಲಿ ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದರ ಕುರಿತು ಪ್ರಶ್ನೆಗಳು ಎದ್ದಿವೆ.

ಕೆಲವು ಸಂದರ್ಭಗಳಲ್ಲಿ ವೈದ್ಯರು ಸೂಚಿಸಿರುವ ಔಷಧದ ಬದಲಿಗೆ ಪರ್ಯಾಯ ಬ್ರ್ಯಾಂಡ್ ಅಥವಾ ಬೇರೆ ಔಷಧಗಳನ್ನು ಶಿಫಾರಸು ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಇಂತಹ ಕ್ರಮಗಳು ರೋಗಿಯ ಚಿಕಿತ್ಸೆಯ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಆನ್‌ಲೈನ್ ಔಷಧ ಮಾರಾಟ ವ್ಯವಸ್ಥೆಯ ಮೇಲೂ ನಿಯಂತ್ರಣ ಅಗತ್ಯವಾಗಿದೆ ಎಂದು ಅಧಿಕಾರಿಗಳು ಪರಿಗಣಿಸಿದ್ದಾರೆ.

ಭಾರಿ ಡಿಸ್ಕೌಂಟ್‌ಗಳ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುವ ಔಷಧ ಮಾರಾಟ ಸಂಸ್ಥೆಗಳ ಮೇಲೂ ನಿಯಮಗಳ ಅನುಸರಣೆ ಪರಿಶೀಲನೆ ನಡೆಯಲಿದೆ.

Exit mobile version