ಬೆಂಗಳೂರು: ರಾಜ್ಯದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವುದರ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ, 125 ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸದಂತೆ ಮತ್ತು ರಾತ್ರಿ 8 ರಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸುವಂತೆ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಜೊತೆಗೆ, ಪರಿಸರಕ್ಕೆ ಹಾನಿಕಾರಕವಾದ ಸಾಂಪ್ರದಾಯಿಕ ಪಟಾಕಿಗಳ ಬದಲಿಗೆ ಹಸಿರು (ಗ್ರೀನ್) ಪಟಾಕಿಗಳನ್ನು ಬಳಸಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಗಣೇಶೋತ್ಸವವನ್ನು ಭಕ್ತಿಭಾವದಿಂದ ಆಚರಿಸುವಾಗ ಜಲಚರ ಜೀವಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳ ಬದಲಿಗೆ, ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸಿ, ವಿಸರ್ಜನೆ ಮಾಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ ವಿನಂತಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಜನರು ಈಗಾಗಲೇ ಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸುತ್ತಿದ್ದಾರೆ. ಈ ಮಾದರಿಯನ್ನು ರಾಜ್ಯದ ಇತರ ಜಿಲ್ಲೆಗಳೂ ಅನುಸರಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
ಪಿಒಪಿ ಮೂರ್ತಿಗಳು ನೀರಿನಲ್ಲಿ ಕರಗದಿರುವುದರಿಂದ ಮತ್ತು ಇವುಗಳಲ್ಲಿ ಬಳಸಲಾಗುವ ಭಾರೀ ಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳು ಜಲಚರ ಜೀವಿಗಳ ಸಾವಿಗೆ ಕಾರಣವಾಗುತ್ತವೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳಿಂದಾಗಿ ಅತಿವೃಷ್ಟಿ, ಅನಾಹುತಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು ಎಂದು ಸಚಿವ ಖಂಡ್ರೆ ಒತ್ತಿ ಹೇಳಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ತಾಲೂಕು ಆಡಳಿತ, ಮತ್ತು ಸ್ಥಳೀಯ ಸಂಸ್ಥೆಗಳು ಈ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. “ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಕೊಡುಗೆಯಾಗಿ ನೀಡೋಣ” ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.