ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಗಂಗಾವತಿ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿಯವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ತೆಲಂಗಾಣ ಹೈಕೋರ್ಟ್ ಈ ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದು, ರೆಡ್ಡಿಯವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಕರ್ನಾಟಕ-ಆಂಧ್ರಪ್ರದೇಶ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ರೆಡ್ಡಿ ಮತ್ತು ಇತರ ಮೂವರಿಗೆ ಸಿಬಿಐ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ಮತ್ತು ತಲಾ ₹10,000 ದಂಡ ವಿಧಿಸಿತ್ತು. ರೆಡ್ಡಿಯವರು ಎರಡನೇ ಆರೋಪಿಯಾಗಿದ್ದರು.
ತೆಲಂಗಾಣ ಹೈಕೋರ್ಟ್ ರೆಡ್ಡಿಯವರಿಗೆ ₹10 ಲಕ್ಷ ರೂ. ಜಾಮೀನು ಮೊತ್ತ ಮತ್ತು ಇಬ್ಬರು ಶ್ಯೂರಿಟಿಗಳನ್ನು ಒದಗಿಸುವಂತೆ ಸೂಚಿಸಿದೆ. ಅಲ್ಲದೆ, ಅವರ ಪಾಸ್‌ಪೋರ್ಟ್‌ನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಆದೇಶಿಸಿದೆ.
ಶಾಸಕ ಸ್ಥಾನ ಮರುಸ್ಥಾಪನೆಯ ಸಾಧ್ಯತೆ
ಸಿಬಿಐ ಕೋರ್ಟ್ ಆದೇಶದ ಬೆನ್ನಿಗೆ, ರೆಡ್ಡಿಯವರ ಶಾಸಕ ಸ್ಥಾನವನ್ನು ಸ್ಪೀಕರ್ ಖಾದರ್ ರದ್ದುಗೊಳಿಸಿದ್ದರು. ಆದರೆ, ತೆಲಂಗಾಣ ಹೈಕೋರ್ಟ್‌ನ ತಡೆಯಾಜ್ಞೆಯಿಂದ ರೆಡ್ಡಿಯವರಿಗೆ ಮತ್ತೆ ಶಾಸಕರಾಗುವ ಅವಕಾಶ ಮೂಡಿದೆ. ಈಗ ರೆಡ್ಡಿಯವರು ಸ್ಪೀಕರ್ ಆದೇಶವನ್ನು ಹಿಂದಕ್ಕೆ ಪಡೆಯಲು ಮನವಿ ಸಲ್ಲಿಸಲಿದ್ದಾರೆ.
ಇದೇ ರೀತಿಯ ಒಂದು ಘಟನೆಯಲ್ಲಿ, ಕೇಂದ್ರದಲ್ಲಿ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಅನರ್ಹಗೊಳಿಸಲಾಗಿತ್ತು. ಆದರೆ, ನಂತರ ಅವರು ಮತ್ತೆ ಸಂಸದರಾಗಿದ್ದರು. ಇದೇ ಮಾದರಿಯಲ್ಲಿ ರೆಡ್ಡಿಯವರಿಗೂ ಶಾಸಕ ಸ್ಥಾನ ಮರಳಿ ಸಿಗುವ ಸಾಧ್ಯತೆ ಇದೆ.