ಗದಗ (ಫೆ.19): ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿ ಪತ್ತೆಯಾದ ಹಿನ್ನೆಲೆ, ಅಲ್ಲಿನ ಪುರಾತನ ದೇವಾಲಯಗಳ ಉತ್ಖನನ ಕಾರ್ಯ ಚುರುಕುಗೊಂಡಿದೆ. ಈ ಸಂತಸದ ಬೆಳವಣಿಗೆಯ ಬೆನ್ನಲ್ಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ.
ಇತ್ತೀಚೆಗೆ ಮಹಾಶಿವರಾತ್ರಿ ದಿನದಂದು ಶಿಂಗಟಾಲೂರು ಗ್ರಾಮದಲ್ಲಿ ಶಿವಲಿಂಗ, ನಂದಿ ವಿಗ್ರಹ ಮತ್ತು ಹೊನ್ನತ್ತೆಮ್ಮ ಮೂರ್ತಿಗಳನ್ನು ಭಗ್ನಗೊಳಿಸಿದ್ದ ಘಟನೆ ಮಾಸುವ ಮುನ್ನವೇ, ಜಿಲ್ಲೆಯ ಮತ್ತೆರಡು ಗ್ರಾಮಗಳಲ್ಲಿ ಇದೇ ರೀತಿಯ ಘಟನೆಗಳು ಬೆಳಕಿಗೆ ಬಂದಿವೆ.
ಎಲ್ಲೆಲ್ಲಿ ನಡೆದಿದೆ ಕೃತ್ಯ?
ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದಲ್ಲಿರುವ ಶಿವ ದೇವಾಲಯದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಲಾಗಿದೆ. ಶಿವನಿಗೆ ಸಲ್ಲುವ ಅತ್ಯಂತ ಪವಿತ್ರ ಸಂಕೇತವಾದ ಶಿವಲಿಂಗವನ್ನು ಭಗ್ನಗೊಳಿಸಿದ್ದಾರೆ. ಮತ್ತೊಂದೆಡೆ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಗ್ರಾಮದ ದಂಡಿನ ಮರಿಯಮ್ಮ ದೇವಸ್ಥಾನದಲ್ಲಿಯೂ ದುಷ್ಕರ್ಮಿಗಳು ದೇವಿಯ ಮೂರ್ತಿಗೆ ಅವಮಾನ ಮಾಡಿದ್ದಾರೆ. ಮರಿಯಮ್ಮ ದೇವಿಯ ಮೂರ್ತಿಯ ಮುಖಕ್ಕೆ ಮಸಿ ಬಳಿದು, ಮುಖಭಾಗವನ್ನು ಹಾನಿಗೊಳಿಸಿದ್ದಾರೆ..
ಪುರಾತನ ಗುಡಿಗಳೇ ಟಾರ್ಗೆಟ್?
ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಹಾಗೂ ಚಿನ್ನದ ನಿಧಿ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯ ಪುರಾತನ ದೇವಾಲಯಗಳ ಮೇಲೆ ಹೆಚ್ಚು ಗಮನ ಸೆಳೆಯಲಾಗಿದೆ. ಇದೇ ಸಂದರ್ಭದಲ್ಲಿ ಇಂತಹ ಧ್ವಂಸಕೃತ್ಯಗಳು ನಡೆಯುತ್ತಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.
ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ
ದೇವಾಲಯಗಳಲ್ಲಿ ಮೂರ್ತಿಗಳು ಭಗ್ನಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ದೇವಸ್ಥಾನಗಳ ಬಳಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ದುಷ್ಟರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪೊಲೀಸ್ ಕ್ರಮ ಮತ್ತು ತನಿಖೆ
ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಿಸಿದ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ತನಿಖೆ ಚುರುಕುಗೊಂಡಿದ್ದು, ಶಂಕಿತ ವ್ಯಕ್ತಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
