ಫಸ್ಟ್‌‌ನೈಟ್ ನಡೆದಿಲ್ಲ ಅಂತ ಪತಿ ವಿರುದ್ಧ ದೂರು ಕೊಟ್ಟ ಪತ್ನಿ

ಬೆಂಗಳೂರು, ಮಾ.20: ಇತ್ತೀಚೆಗೆ ಬ್ರೇಕಪ್, ಡಿವೋರ್ಸ್ ಸಾಮಾನ್ಯವಾಗುತ್ತಿದ್ದು, ಗಂಡ-ಹೆಂಡತಿಯ ನಡುವಿನ ಸಣ್ಣಪುಟ್ಟ ವಿಚಾರಗಳಿಗೂ ಕಾನೂನು ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿವೆ. ಅಂತಹದ್ದೇ ಅಪರೂಪದ ಪ್ರಕರಣವೊಂದು ಬೆಂಗಳೂರಿನ ಸುಬ್ರಹ್ಮಣ್ಯಪುರ ಗಬ್ಬಲಾಳ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮದುವೆಯಾದ ಬಳಿಕ ಫಸ್ಟ್ ನೈಟ್ ನಡೆದಿಲ್ಲ ಎಂದು ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಪತ್ನಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಗರದ ಸುಬ್ರಹ್ಮಣ್ಯಪುರ ಪೊಲೀಸ್ ವ್ಯಾಪ್ತಿಯ ಗಬ್ಬಲಾಳ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಅವನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮದುವೆಯಾದ ನಂತರ ಪತಿ ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸದೇ ದೂರವಿದ್ದು, ಇದರಿಂದ ತಾನು ಮಾನಸಿಕವಾಗಿ ತೀವ್ರ ಒತ್ತಡ ಅನುಭವಿಸಿದ್ದಾಗಿ ಪತ್ನಿ ಆರೋಪಿಸಿದ್ದಾಳೆ.

ಪತ್ನಿ ನೀಡಿದ ದೂರಿನ ಪ್ರಕಾರ, 2024ರ ಜೂನ್ ತಿಂಗಳಿಂದಲೇ ಸಮಸ್ಯೆಗಳು ಆರಂಭವಾಗಿದ್ದು, ಪತಿಯ ಮನೆಯಲ್ಲಿ ವಾಸಿಸುತ್ತಿದ್ದಾಗಲೇ ದಾಂಪತ್ಯದಲ್ಲಿ ಅಸಮಾಧಾನ ಉಂಟಾಗಿದೆ. ಪತಿ ರಾಘವೇಂದ್ರ ತನ್ನೊಂದಿಗೆ ಯಾವುದೇ ರೀತಿಯ ವೈವಾಹಿಕ ಜೀವನ ಮುಂದುವರಿಸಲು ಆಸಕ್ತಿ ತೋರಿಸದೆ ದೂರವಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ. ಇದು ನನಗೆ  ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿದೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಪತಿ ಹಾಗೂ ಅವನ ಕುಟುಂಬದವರು ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದರೆಂದು ಮಹಿಳೆ ಆರೋಪಿಸಿದ್ದಾಳೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ಚಿನ್ನದ ಆಭರಣಗಳನ್ನು ನೀಡಿದರೂ, ಅದರಿಂದ ಯಾವುದೇ ಬದಲಾವಣೆ ಆಗದೆ ಕಿರುಕುಳ ಮುಂದುವರಿದಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾಳೆ.

ಕೆಲ ಸಮಯದ ನಂತರ ಪತಿ ತನ್ನನ್ನು ಮನೆಗೆ ಬಿಟ್ಟು, ನಂತರ ಯಾವುದೇ ರೀತಿಯ ಸಂಪರ್ಕವಿಲ್ಲದೆ ನಿರ್ಲಕ್ಷ್ಯ ಮಾಡಿದ್ದಾನೆ. ಇದರಿಂದ ತಾನು ಸಂಪೂರ್ಣವಾಗಿ ಒಂಟಿಯಾಗಿದ್ದು, ಜೀವನದ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಆಕೆ ತಿಳಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ, ಮಹಿಳೆ ಸೌತ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 85 ಹಾಗೂ 115(2) ಅಡಿಯಲ್ಲಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ರಾಘವೇಂದ್ರ ಸೇರಿ ಒಟ್ಟು ಆರು ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

Exit mobile version