ಮಗು ಕಪ್ಪು ಎಂದು ಪ್ರಿಯಕರನ ಜೊತೆ ಸೇರಿ ಮಗಳನ್ನೇ ಕೊಂದ ತಾಯಿ: 3 ತಿಂಗಳ ಬಳಿಕ ಕೇಸ್‌ ದಾಖಲು

Untitled design 2026 06 06T125731.927

ಬೆಂಗಳೂರು: ತನ್ನ ಪ್ರಿಯಕರನ ಜೊತೆ ನೆಮ್ಮದಿಯಾಗಿ ಬಾಳಲು ಹೆತ್ತ ತಾಯಿಯೇ ತನ್ನ 6 ವರ್ಷದ ಮಗಳನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಗು ಸಾವನ್ನಪ್ಪಿದ ಮೂರು ತಿಂಗಳ ಬಳಿಕ ತಾಯಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮೃತ ಬಾಲಕಿ ವೆನ್ನಿಲಾ (6) ಎಂದು ಗುರುತಿಸಲಾಗಿದ್ದು, ಆಕೆಯ ತಂದೆ ಪ್ರವೀಣ್ ನೀಡಿದ ದೂರಿನ ಆಧಾರದಲ್ಲಿ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಮೋಹನ್ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. 2007ರಲ್ಲಿ ಮದುವೆಯಾದ ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಇವರ ದಾಂಪತ್ಯ ಆರಂಭದಲ್ಲಿ ಸಾಮಾನ್ಯವಾಗಿದ್ದರೂ, ನಂತರದ ದಿನಗಳಲ್ಲಿ ಪ್ರಿಯಾಂಕಾ ಮತ್ತು ಆಕೆಯ ಕಾಲೇಜು ಗೆಳೆಯ ಮೋಹನ್ ನಡುವೆ ಮತ್ತೆ ಸಂಪರ್ಕ ಬೆಳೆದು, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಆರೋಪ ಕೇಳಿಬಂದಿದೆ.

ಪ್ರಿಯಾಂಕಾ ತನ್ನ ಪತಿ ಮತ್ತು ಕುಟುಂಬದಿಂದ ದೂರವಾಗುತ್ತಾ, ಪ್ರಿಯಕರ ಮೋಹನ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಆರಂಭಿಸಿದ್ದಳು. ಈ ವೇಳೆ ತನ್ನ ಕಿರಿಯ ಮಗಳು ವೆನ್ನಿಲಾಳನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದಳು ಎಂದು ತಿಳಿದುಬಂದಿದೆ. ಈ ಸಂಬಂಧದ ಬಗ್ಗೆ ಪತಿ ಪ್ರವೀಣ್ ಪ್ರಶ್ನಿಸಿದಾಗ, ವಿಚ್ಛೇದನ ನೀಡುವಂತೆ ಒತ್ತಾಯ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ

ಈ ನಡುವೆ, ಕಳೆದ ಮಾರ್ಚ್ 24ರಂದು ವೆನ್ನಿಲಾ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾಳೆ. ಆರಂಭದಲ್ಲಿ ತಾಯಿ ಪ್ರಿಯಾಂಕಾ ನೀಡಿದ ವಿವರಣೆಗಳು ಗೊಂದಲ ಉಂಟು ಮಾಡಿದ್ದವು. ಮಗಳಿಗೆ ಬಿರಿಯಾನಿ ಮತ್ತು ಐಸ್‌ಕ್ರೀಂ ಕೊಡಿಸಿ, ಕಾರಿನಲ್ಲಿ ಎಸಿ ಹಾಕಿ ಮಲಗಿಸಿದ್ದೆ, ಬೆಳಗ್ಗೆ ನೋಡಿದಾಗ ಮಗು ಉಸಿರಿಲ್ಲದೆ ಇದ್ದಳು ಎಂದು ಹೇಳಿದ್ದಳು ಎಂದು ಆರೋಪಿಸಲಾಗಿದೆ. ಆದರೆ ಈ ಹೇಳಿಕೆಗಳ ಮೇಲೆ ತಂದೆಗೆ ಅನುಮಾನ ಹೆಚ್ಚಾಗಿದೆ.

ಮಗುವಿನ ಸಾವಿನ ಬಗ್ಗೆ ನಿಜ ತಿಳಿಯಲು ತಂದೆ ಪ್ರವೀಣ್ ಮರಣೋತ್ತರ ಪರೀಕ್ಷಾ ವರದಿಯನ್ನು ವಿದೇಶದಲ್ಲಿದ್ದ ತನ್ನ ಸಂಬಂಧಿ ವೈದ್ಯೆಯೊಬ್ಬರಿಗೆ ಕಳುಹಿಸಿದ್ದಾನೆ. ಆ ವೈದ್ಯೆ ವರದಿಯನ್ನು ಪರಿಶೀಲಿಸಿದ ಬಳಿಕ ಇದು ಸಹಜ ಸಾವು ಅಲ್ಲ, ಈ ಪ್ರಕರಣದಲ್ಲಿ ಅನುಮಾನಗಳಿವೆ ಎಂದು ಸೂಚಿಸಿದ್ದಾರೆ.

ವೈದ್ಯೆಯ ಸಲಹೆ ಮತ್ತು ಅನುಮಾನಗಳ ಆಧಾರದ ಮೇಲೆ ಪ್ರವೀಣ್ ತನಿಖೆಗೆ ಒತ್ತಾಯಿಸಿದ್ದಾರೆ. ಆತನ ಆರೋಪದ ಪ್ರಕಾರ, ಪ್ರಿಯಕರನ ಜೊತೆ ಹೊಸ ಜೀವನ ಆರಂಭಿಸಲು ಅಡ್ಡಿಯಾಗುತ್ತಿದ್ದಳು ಎಂಬ ಕಾರಣಕ್ಕೆ ಮತ್ತು ಮಗು ಕಪ್ಪು ಬಣ್ಣ ಎಂಬ ಕಾರಣಕ್ಕೆ ತಾಯಿ ಹಾಗೂ ಆಕೆಯ ಪ್ರಿಯಕರ ಸೇರಿ ಮಗುವಿಗೆ ಹಲ್ಲೆ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಕಾಡುಗೋಡಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಪ್ರಿಯಾಂಕಾ ಪ್ರಿಯಕರ ಮೋಹನ್‌ನನ್ನು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ತಾಯಿ ಪ್ರಿಯಾಂಕಾ ಈಗ ತಲೆಮರೆಸಿಕೊಂಡಿದ್ದು, ಆಕೆಯಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Exit mobile version