ಅಸಲಿ ಔಷಧಿಗಳ ನಡುವೆ ನಕಲಿ ಮಾತ್ರೆ ಮಿಕ್ಸ್‌ ಮಾಡಿ ಆಸ್ಪತ್ರೆಗಳಿಗೆ ಪೂರೈಕೆ: SIT ಬಿಗ್ ಆಪರೇಷನ್

ಬೆಂಗಳೂರಲ್ಲಿ (9)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಔಷಧಿಗಳ ತಯಾರಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಅಸಲಿ ಔಷಧಿಗಳ ಸ್ಟಾಕ್‌ನೊಂದಿಗೆ ನಕಲಿ ಔಷಧಿಗಳನ್ನು ಸೇರಿಸಿ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ಪೂರೈಸಲಾಗಿದೆ ಎಂಬ ಆರೋಪ ಬೆಳಕಿಗೆ ಬಂದಿದೆ. ಬೆಂಗಳೂರು ಪೊಲೀಸರ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಯಲ್ಲಿ ಅಂತರರಾಜ್ಯ ಮಟ್ಟದ ಜಾಲದ ಬಗ್ಗೆ ಹಲವು ಮಹತ್ವದ ಮಾಹಿತಿಗಳು ಹೊರಬರುತ್ತಿವೆ.

ಅಸಲಿ ಸ್ಟಾಕ್‌ನಲ್ಲೇ ನಕಲಿ ಔಷಧಿ?

SIT ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳು ಅಸಲಿ ಔಷಧಿಗಳೊಂದಿಗೆ ನಕಲಿ ಉತ್ಪನ್ನಗಳನ್ನು ಸೇರಿಸಿ ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳಿಗೆ ಪೂರೈಸುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಗ್ರಾಹಕರು ಅಥವಾ ಖರೀದಿದಾರರಿಗೆ ಅನುಮಾನ ಬಾರದಂತೆ ನಕಲಿ ಔಷಧಿಗಳನ್ನು ಮಾರುಕಟ್ಟೆಗೆ ತಲುಪಿಸುವ ಪ್ರಯತ್ನ ನಡೆದಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ತನಿಖೆಯ ವೇಳೆ ನಕಲಿ ಔಷಧಿಗಳ ತಯಾರಿಕೆ, ಪ್ಯಾಕಿಂಗ್, ಲೇಬಲಿಂಗ್ ಹಾಗೂ ವಿತರಣೆಗೆ ಸಂಬಂಧಿಸಿದ ಹಲವು ಅಂಶಗಳು ಬೆಳಕಿಗೆ ಬಂದಿವೆ. ಜಾಲದ ಸಂಪೂರ್ಣ ಸಪ್ಲೈ ಚೈನ್ ಅನ್ನು ಪತ್ತೆಹಚ್ಚಲು SIT ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರಶಾಂತ್ ರಾಜನ್‌ಬಾಬು ಬಂಧನ

ಪ್ರಕರಣದ ಪ್ರಮುಖ ಆರೋಪಿ ಎಂದು ತನಿಖಾಧಿಕಾರಿಗಳು ಗುರುತಿಸಿರುವ ಪ್ರಶಾಂತ್ ರಾಜನ್‌ಬಾಬುವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ ವೇಳೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಪ್ರಶಾಂತ್ ರಾಜನ್‌ಬಾಬು ಈ ಹಿಂದೆ ನವದೆಹಲಿ, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿ 10 ವರ್ಷಕ್ಕೂ ಹೆಚ್ಚು ಕಾಲ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿದ್ದ. ಈ ಅವಧಿಯಲ್ಲಿ ಯಾವ ಔಷಧಿಗಳಿಗೆ ಹೆಚ್ಚಿನ ಬೇಡಿಕೆಯಿದೆ, ಅವುಗಳ ಮಾರುಕಟ್ಟೆ ಬೆಲೆ ಮತ್ತು ವಿತರಣಾ ವ್ಯವಸ್ಥೆಯ ಬಗ್ಗೆ ಆತ ಮಾಹಿತಿ ಪಡೆದುಕೊಂಡಿದ್ದ ಎನ್ನುವುದು ತನಿಖೆಯ ಒಂದು ಪ್ರಮುಖ ಅಂಶವಾಗಿದೆ.

DM Pharma ಮೂಲಕ ಜಾಲ?

ತನಿಖಾಧಿಕಾರಿಗಳ ಪ್ರಕಾರ, 2021ರಲ್ಲಿ ಪ್ರಶಾಂತ್, ಆತನ ಪತ್ನಿ ಹಾಗೂ ಆಪ್ತ ಸಹಚರ ಬಾಲಸುಬ್ರಹ್ಮಣ್ಯ ಸೇರಿ ಚೆನ್ನೈನಲ್ಲಿ DM Pharma ಎಂಬ ಔಷಧ ವಿತರಣಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ಸಂಸ್ಥೆಯ ಮೂಲಕ ಔಷಧಿಗಳನ್ನು ನಿಯಮಿತವಾಗಿ ಪೂರೈಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ನಕಲಿ ಔಷಧಿಗಳ ತಯಾರಿಕೆ ಹಾಗೂ ವಿತರಣೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉತ್ತರಾಖಂಡ ಸೇರಿದಂತೆ ಇತರ ರಾಜ್ಯಗಳಿಂದ ಕಚ್ಚಾ ವಸ್ತುಗಳನ್ನು ತರಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಾವರೆಕೆರೆ ಫಾರ್ಮ್‌ಹೌಸ್‌ನಲ್ಲಿ ತಯಾರಿಕೆ?

2025ರಲ್ಲಿ ಬೆಂಗಳೂರಿನ ದಕ್ಷಿಣ ಭಾಗದ ತಾವರೆಕೆರೆ ಸಮೀಪದ ಫಾರ್ಮ್‌ಹೌಸ್‌ವೊಂದನ್ನು ಬಾಡಿಗೆಗೆ ಪಡೆದು ನಕಲಿ ಔಷಧಿಗಳ ತಯಾರಿಕೆ ನಡೆಸಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸಿದ್ಧ ಔಷಧ ಕಂಪನಿಗಳ ಹೆಸರನ್ನು ಹೋಲುವ ಲೇಬಲ್ ಮತ್ತು ಸ್ಟಿಕ್ಕರ್‌ಗಳನ್ನು ಬಳಸಲಾಗುತ್ತಿತ್ತು ಎಂಬ ಆರೋಪವೂ ಇದೆ.

ಈ ಉತ್ಪನ್ನಗಳನ್ನು ವಿವಿಧ ವಿತರಣಾ ಸಂಸ್ಥೆಗಳ ಮೂಲಕ ಬೆಂಗಳೂರಿನ ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳಿಗೆ ಪೂರೈಸಲಾಗಿದೆ ಎಂಬ ಶಂಕೆಯ ಹಿನ್ನೆಲೆ SIT ತನಿಖೆ ನಡೆಸುತ್ತಿದೆ.

ಆಸ್ಪತ್ರೆಗಳಿಗೆ ನೋಟಿಸ್

ನಕಲಿ ಔಷಧಿಗಳನ್ನು ಖರೀದಿಸಿರುವ ಸಾಧ್ಯತೆಯಿರುವ ಆಸ್ಪತ್ರೆಗಳು ಹಾಗೂ ಇತರ ಖರೀದಿದಾರರಿಂದ ಮಾಹಿತಿ ಸಂಗ್ರಹಿಸಲು SIT ನೋಟಿಸ್ ಜಾರಿಗೊಳಿಸಿದೆ. ಯಾವ ಸಂಸ್ಥೆಯಿಂದ ಎಷ್ಟು ಔಷಧಿಗಳನ್ನು ಖರೀದಿಸಲಾಗಿದೆ, ಅವುಗಳ ಬಿಲ್ ಮತ್ತು ವಿತರಣಾ ವಿವರಗಳೇನು ಎಂಬುದನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.

ಇದೇ ವೇಳೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ಈಗಾಗಲೇ 16 ಔಷಧ ಸಗಟು/ಚಿಲ್ಲರೆ ಸಂಸ್ಥೆಗಳ ಪರವಾನಗಿಗಳನ್ನು ರದ್ದುಪಡಿಸಿದ್ದು, ಎಂಟು ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ. 

ತನಿಖೆ ಮತ್ತಷ್ಟು ಚುರುಕು

ಪ್ರಕರಣದಲ್ಲಿ ಪ್ರಶಾಂತ್ ರಾಜನ್‌ಬಾಬು ಬಂಧನದ ಬಳಿಕ ಆತನ ಸಹಚರ ಬಾಲಸುಬ್ರಹ್ಮಣ್ಯನನ್ನೂ ಚೆನ್ನೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಆತ DM Pharmaನ ಪಾಲುದಾರನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಔಷಧಿಗಳ ತಯಾರಿಕೆಯಿಂದ ಹಿಡಿದು ಪ್ಯಾಕಿಂಗ್, ವಿತರಣೆ, ಆಸ್ಪತ್ರೆಗಳಿಗೆ ಪೂರೈಕೆ ಮತ್ತು ಹಣಕಾಸು ವಹಿವಾಟಿನವರೆಗೆ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು SIT ತನಿಖೆ ಮುಂದುವರಿಸಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಹಿನ್ನೆಲೆ ಪ್ರಕರಣದ ತನಿಖೆ ಮಹತ್ವ ಪಡೆದುಕೊಂಡಿದೆ. 

Exit mobile version