ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ನಗರದ ಹಲವು ಭಾಗಗಳಲ್ಲಿ ಅವಾಂತರಗಳು ಸಂಭವಿಸಿವೆ. ಏರ್‌ಪೋರ್ಟ್ ರಸ್ತೆ, ಹೆಬ್ಬಾಳ, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇದೇ ವೇಳೆ ಪೀಣ್ಯ-ದಾಸರಹಳ್ಳಿ ಸಮೀಪದ ಭಾರತೀ ಚಿತ್ರಮಂದಿರದಲ್ಲಿ ಮಳೆಯಿಂದಾಗಿ ಅವಘಡ ಸಂಭವಿಸಿದ್ದು, ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕನೊಬ್ಬ ಗಾಯಗೊಂಡಿದ್ದಾರೆ.
ಸಿನಿಮಾ ನೋಡುತ್ತಿದ್ದಾಗಲೇ ಮೇಲ್ಛಾವಣಿ ಕುಸಿತ
ಪೀಣ್ಯ-ದಾಸರಹಳ್ಳಿ ಸಮೀಪದ ಭಾರತೀ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಸಿನಿಮಾ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಮೇಲ್ಛಾವಣಿಯ ಒಂದು ಭಾಗ ಹಠಾತ್ ಕುಸಿದು ಬಿದ್ದಿದೆ. ಮೇಲ್ಛಾವಣಿಯ ಭಾಗ ಪ್ರೇಕ್ಷಕನ ಮೇಲೆ ಬಿದ್ದ ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಅವಘಡ ಸಂಭವಿಸುತ್ತಿದ್ದಂತೆ ಚಿತ್ರಮಂದಿರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಎಚ್ಚೆತ್ತುಕೊಂಡ ಥಿಯೇಟರ್ ಸಿಬ್ಬಂದಿ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಗಾಯಗೊಂಡ ಪ್ರೇಕ್ಷಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಇತ್ತ ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಬಳಗೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಬಳಿ ಭಾರೀ ಪ್ರಮಾಣದಲ್ಲಿ ಮಳೆ ನೀರು ನಿಂತು ಮಿನಿ ಕೆರೆಯಂತಾಗಿದೆ. ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ವೈಟ್‌ಫೀಲ್ಡ್‌ನ ವಿಬ್‌ಗಯಾರ್ ರಸ್ತೆಯಲ್ಲೂ ಮಳೆ ನೀರು ಅಪಾರ ಪ್ರಮಾಣದಲ್ಲಿ ನಿಂತಿದೆ. ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡ ಪರಿಣಾಮ ಕೆಲವು ವಾಹನಗಳು ನೀರಿನಲ್ಲಿ ಸಿಲುಕಿ ಕೆಟ್ಟು ರಸ್ತೆಯಲ್ಲೇ ನಿಲ್ಲುವಂತಾಗಿದೆ. ಇದರಿಂದ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ.
ಸಹಕಾರ ನಗರದಲ್ಲೂ ಜಲಾವೃತ
ಸಹಕಾರ ನಗರದಲ್ಲಿಯೂ ಮಳೆ ನೀರು ರಸ್ತೆಯಲ್ಲಿ ನಿಂತಿದ್ದು, ಸ್ಥಳೀಯರಿಗೆ ತೊಂದರೆ ಉಂಟಾಗಿದೆ. ಚರಂಡಿ ಅಥವಾ ಮೋರಿ ಬ್ಲಾಕ್ ಆಗಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಂತಿದೆ.
ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ
ಭಾರೀ ಮಳೆಯ ಪರಿಣಾಮ ಏರ್‌ಪೋರ್ಟ್ ರಸ್ತೆ, ಹೆಬ್ಬಾಳ, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ವಾಹನ ಸಂಚಾರದ ಮೇಲೆ ಪರಿಣಾಮ ಬೀರಿದೆ. ಕೆಲವೆಡೆ ವಾಹನಗಳ ವೇಗ ತಗ್ಗಿದ್ದು, ಮತ್ತಷ್ಟು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ವಾಹನ ಸವಾರರಿಗೆ ಸಂಚಾರ ಪೊಲೀಸರ ಎಚ್ಚರಿಕೆ
ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸೂಚಿಸಲಾಗಿದ್ದು, ತೀವ್ರ ಮಳೆಯ ಸಂದರ್ಭದಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ.
