ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ಹಾಗೂ ಬಳ್ಳಾರಿಯ ಬಿಜೆಪಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರೂ ಆದ ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸುತ್ತಿರುವ ಶೋಧಕಾರ್ಯ ಎರಡನೇ ದಿನಕ್ಕೂ ಮುಂದುವರೆದಿದೆ.
ಬುಧವಾರ ಮುಂಜಾನೆ 5.30 ಗಂಟೆಗೆ ಬೆಳಗಾವಿಯ ಟಿವಿ ಸೆಂಟರ್ ನಲ್ಲಿ ಇರುವ ಮಂಜುನಾಥ್ ಅವರ ನಿವಾಸಕ್ಕೆ ಲಗ್ಗೆಯಿಟ್ಟ ಬೆಂಗಳೂರು ಮತ್ತು ಗೋವಾದ ಇಡಿ ಅಧಿಕಾರಿಗಳ ಜಂಟಿ ತಂಡ, ಸತತ 24 ಗಂಟೆಗಳಿಂದ ಮನೆಯಿಂದ ಹೊರಗೆ ಬಂದಿಲ್ಲ. ಅಧಿಕಾರಿಗಳು ತಮಗೆ ಬೇಕಾದ ಉಪಹಾರ ಮತ್ತು ಊಟವನ್ನು ಮನೆಗೇ ತರಿಸಿಕೊಂಡು ಶೋಧ ಕಾರ್ಯ ಮತ್ತು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಪ್ರಮುಖ ದಾಖಲೆಗಳು ವಶ
ಮನೆಯಲ್ಲಿ ನಡೆದ ಶೋಧಕಾರ್ಯದ ವೇಳೆ ಬೇನಾಮಿ ಬಾರ್ ಲೈಸೆನ್ಸ್ ಒಪ್ಪಂದದ ಪತ್ರಗಳು, ಅಕ್ರಮ ಆಸ್ತಿಯ ದಾಖಲೆಗಳು, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಪ್ರಮುಖ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ವೇಳೆ ಮಂಜುನಾಥ್ ಅವರ ಪತ್ನಿ ಮತ್ತು ಕುಟುಂಬಸ್ಥರು ಮನೆಯಲ್ಲೇ ಇದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಮಂಜುನಾಥ್ ವಶ
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಸಮ್ಮಿಟ್ ಅಪಾರ್ಟ್‌ಮೆಂಟ್‌ನಲ್ಲಿದ್ದ ವೈ. ಮಂಜುನಾಥ್ ಅವರನ್ನು ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
10 ಕಡೆಗಳಲ್ಲಿ ಬೃಹತ್ ದಾಳಿ
ಬೆಳಗಾವಿಯ 6 ಸ್ಥಳಗಳು ಸೇರಿದಂತೆ ರಾಜ್ಯದ ಒಟ್ಟು 10 ಕಡೆಗಳಲ್ಲಿ ಅರೆಸೇನಾ ಪಡೆಗಳ ಬಿಗಿ ಭದ್ರತೆಯೊಂದಿಗೆ ಈ ಬೃಹತ್ ದಾಳಿ ನಡೆದಿದೆ. ಅಬಕಾರಿ ಇಲಾಖೆಗೆ ಸಂಬಂಧಿಸಿದ ಆರ್ಥಿಕ ಅವ್ಯವಹಾರ ಪ್ರಕರಣದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಇದುವರೆಗೆ ಜಾರಿ ನಿರ್ದೇಶನಾಲಯವು ಯಾವುದೇ ಅಧಿಕೃತ ಹೇಳಿಕೆಯನ್ನು ಹೊರಡಿಸಿಲ್ಲ. ಅಲ್ಲದೆ, ಮಂಜುನಾಥ್ ಅವರ ಕುಟುಂಬದವರು ಕೂಡ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆಯು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮತ್ತು ಮಂಜುನಾಥ್ ಅವರ ರಾಜಕೀಯ ವಲಯಕ್ಕೆ ಸಂಬಂಧಿಸಿದಂತೆ ತೀವ್ರ ಚರ್ಚೆಗೆ ಕಾರಣವಾಗಿದೆ. ಎರಡನೇ ದಿನವೂ ಮುಂದುವರೆದಿರುವ ಈ ಕಾರ್ಯಾಚರಣೆಯು ಎಷ್ಟು ಕಾಲ ಮುಂದುವರಿಯಲಿದೆ ಎಂಬುದು ತಿಳಿದುಬಂದಿಲ್ಲ.
