ತುಮಕೂರು, ಮೇ 19: ದುಬಾರೆ ಆನೆ ಶಿಬಿರದಲ್ಲಿ ನಡೆದ ಭೀಕರ ಕಾಳಗದಲ್ಲಿ ತೀವ್ರ ಗಾಯಗೊಂಡಿದ್ದ ಮಾರ್ತಾಂಡ (53) ಎಂಬ ಆನೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ. ನಿನ್ನೆ ದಸರಾ ಆನೆ ಕಂಜನ್ ಮತ್ತು ಮಾರ್ತಾಂಡ ನಡುವೆ ನಡೆದಿದ್ದ ಈ ಕಾಳಗದಲ್ಲಿ ಒಬ್ಬ ಪ್ರವಾಸಿ ಮಹಿಳೆಯೂ ಸಾವನ್ನಪ್ಪಿದ್ದರು. ಈ ಘಟನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, “ಅನಿರೀಕ್ಷಿತ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಹಾಗೂ ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ” ಎಂದು ಹೇಳಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಮೃತ ಮಾರ್ತಾಂಡ ಆನೆಗೆ ಸುಮಾರು 53 ವರ್ಷ ವಯಸ್ಸಾಗಿದ್ದು, 2023ರಲ್ಲಿ ಹಾಸನ ಜಿಲ್ಲೆಯ ಆಲೂರು ಭಾಗದಲ್ಲಿ ಸೆರೆ ಹಿಡಿಯಲಾಗಿತ್ತು. ಸುಮಾರು 4500 ಕೆ.ಜಿ. ತೂಕ ಹೊಂದಿತ್ತು. ಇನ್ನು ಕಂಜನ್ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯ ಯಸಳೂರು ಭಾಗದಲ್ಲಿ ಸೆರೆ ಹಿಡಿಯಲಾಗಿತ್ತು. 26 ವರ್ಷದ ಈ ಆನೆ ಮೂರು ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಗಮನ ಸೆಳೆದಿತ್ತು. ಆದರೆ ಇದೀಗ ನಡೆದ ಘಟನೆ ಬಳಿಕ ಕಂಜನ್ ಆನೆಯನ್ನು ಮುಂದಿನ ದಿನಗಳಲ್ಲಿ ದಸರಾ ಮಹೋತ್ಸವಕ್ಕೆ ಬಳಸಬಾರದು ಎಂದು ಸೂಚನೆ ನೀಡಲಾಗಿದೆ.
ಇದೇ ಘಟನೆ ವೇಳೆ ತಮಿಳುನಾಡು ಮೂಲದ ಮಹಿಳೆಯೊಬ್ಬರು ಆನೆಗಳ ಕಾಳಗದ ಮಧ್ಯೆ ಸಿಲುಕಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಕ್ಕೆ ಸರ್ಕಾರ ನಿಯಮಾನುಸಾರ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದಿದ್ದಾರೆ.
ದುರ್ಘಟನೆ ಬಳಿಕ ದುಬಾರೆ ಆನೆ ಶಿಬಿರವನ್ನು ಎರಡು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದ್ದು, ಶಿಬಿರ ಸುತ್ತಮುತ್ತಲಿನ ವ್ಯಾಪಾರ ಚಟುವಟಿಕೆಗಳೂ ಸ್ತಬ್ಧಗೊಂಡಿವೆ.
ಈ ದುರಂತದ ಬೆನ್ನಲ್ಲೇ ಕರ್ನಾಟಕ ಅರಣ್ಯ ಇಲಾಖೆ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ವನ್ಯಜೀವಿಗಳನ್ನು ಕನಿಷ್ಠ 100 ಅಡಿ ದೂರದಿಂದ ಮಾತ್ರ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಆನೆಗಳ ಹತ್ತಿರ ಹೋಗಿ ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅಲ್ಲದೇ ಪ್ರವಾಸಿಗರಿಗೆ ಆನೆಗಳಿಗೆ ಆಹಾರ ನೀಡುವ ಪದ್ಧತಿಗೂ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಬಾಳೆಹಣ್ಣು, ಕಬ್ಬು, ಬೆಲ್ಲ ಸೇರಿದಂತೆ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಿಸಲು ಅವಕಾಶ ಇಲ್ಲ ಎಂದು ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಜೊತೆಗೆ ಆನೆಗಳಿಗೆ ಮೈತೊಳೆಯುವಂತಹ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ.
