ಕೊಡಗು: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರಕ್ಕೆ (Dubare Elephant Camp) ಭೇಟಿ ನೀಡಿದ್ದ ಮಹಿಳೆಯೊಬ್ಬರು ಎರಡು ಸಾಕಾನೆಗಳ ನಡುವೆ ನಡೆದ ದಿಢೀರ್ ಕಾಳಗಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ತಮಿಳುನಾಡಿನ ಚೆನ್ನೈ ಮೂಲದ ಜಿನ್ನು (33) ಎಂಬ ಪ್ರವಾಸಿ ಮಹಿಳೆಯೇ ಆನೆಗಳ ದಾಳಿಗೆ ತುತ್ತಾಗಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರ್ದೈವಿ.
ಮೇ 18, 2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಕಾವೇರಿ ನದಿಯ ತಟದಲ್ಲಿರುವ ಈ ಶಿಬಿರಕ್ಕೆ ಪ್ರತಿದಿನವೂ ಸಾವಿರಾರು ಪ್ರವಾಸಿಗರು ಆನೆಗಳನ್ನು ಹತ್ತಿರದಿಂದ ನೋಡಲು ಆಗಮಿಸುತ್ತಾರೆ.
ಶಿಬಿರದಲ್ಲಿ ಎಂದಿನಂತೆ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತಿತ್ತು. ಮಾವುತರು ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಸಾಕಾನೆಗಳನ್ನು ನೀರಿಗೆ ಕರೆತಂದಿದ್ದರು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುವಲ್ಲಿ, ಆನೆಯು ಸ್ವಲ್ಪ ವೇಗವಾಗಿ ಸಾಗಿ ಪಕ್ಕದಲ್ಲೇ ಇದ್ದ ಕಂಜನ್ ಆನೆಗೆ ತಾಗಿತು.
ತನ್ನ ಮೈಗೆ ತಾಗುತ್ತಿದ್ದಂತೆಯೇ ಕೆರಳಿದ ಕಂಜನ್ ಆನೆ ತೀವ್ರ ಆಕ್ರೋಶಗೊಂಡು ಎದುರಾಳಿ ಮಾರ್ತಾಂಡ ಮೇಲೆ ಮುಗಿಬಿದ್ದಿತು. ಒಂದೇ ಕ್ಷಣದಲ್ಲಿ ನದಿಯ ದಡದಲ್ಲೇ ಎರಡು ದೈತ್ಯ ಆನೆಗಳು ಪರಸ್ಪರ ಕಾದಾಡಲು ಆರಂಭಿಸಿದವು. ಮಾವುತರು ಆನೆಗಳನ್ನು ನಿಯಂತ್ರಿಸಲು ನೀರು ಚಿಮುಕಿಸಿದರೂ, ಕಾಳಗವನ್ನು ತಡೆಯಲು ಸಾಧ್ಯವಾಗಲಿಲ್ಲ.
ದಿಢೀರ್ ಶುರುವಾದ ಕಾಳಗವನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಗದ್ದಲದ ನಡುವೆ ಸಿಲುಕಿದ ಪ್ರವಾಸಿ ಮಹಿಳೆ ಜಿನ್ನು ಅವರಿಗೆ ಕೆರಳಿದ ಆನೆಗಳು ಬಲವಾಗಿ ಡಿಕ್ಕಿ ಹೊಡೆದಿವೆ. ಆನೆಯ ಕಾಲಿಗೆ ಸಿಲುಕಿದ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಮಾವುತರಾದ ಗೌಸ್ ಮತ್ತು ವಿಜಯ್ ಅವರು ತಕ್ಷಣವೇ ಆನೆಗಳನ್ನು ನಿಯಂತ್ರಿಸಲು ಶ್ರಮಿಸಿದರೂ, ಅಷ್ಟರಲ್ಲಾಗಲೇ ಅನಾಹುತ ಸಂಭವಿಸಿತ್ತು. ಇಬ್ಬರು ಮಾವುತರು ಸಹ ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.