ವೈದ್ಯೆ ಕೃತಿಕಾ ರೆಡ್ಡಿ ರೂಮ್‌‌ನಲ್ಲಿ ರಾಶಿ ರಾಶಿ ಔಷಧ ಪತ್ತೆ: ಮಹೇಂದ್ರ ರೆಡ್ಡಿ ಮುಖವಾಡ ಬಯಲು!

Untitled design 2025 10 21t121946.115

ಬೆಂಗಳೂರು, ಅಕ್ಟೋಬರ್ 21, 2025: ವೈದ್ಯ ಡಾ. ಮಹೇಂದ್ರ ರೆಡ್ಡಿಯಿಂದ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯ ಕೊಲೆ ಪ್ರಕರಣವು ಬೆಂಗಳೂರಿನ ಮಾರತಹಳ್ಳಿಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಆರೋಪಿ ಮಹೇಂದ್ರನಿಂದ ಆಘಾತಕಾರಿ ಮಾಹಿತಿಗಳು ಬಹಿರಂಗಗೊಂಡಿವೆ. ಕೃತಿಕಾರ ದೇಹದಲ್ಲಿ ಕಂಡುಬಂದ ಮಾರಕ ಡ್ರಗ್ಸ್‌ನ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದರ ಜೊತೆಗೆ, ಮಾರಾಟಕ್ಕೆ ನಿಷೇಧಿತ ಔಷಧಿಗಳನ್ನು ಮಹೇಂದ್ರ ಮನೆಗೆ ತಂದಿದ್ದು, ಕೃತಿಕಾ ಇದ್ದ ಕೊಠಡಿಯನ್ನು ಕ್ಲಿನಿಕ್‌ನಂತೆ ಬದಲಾಯಿಸಿದ್ದ ಎಂಬ ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.

ಅನಸ್ತೇಷಿಯಾ ಇಂಜೆಕ್ಷನ್‌ನ ರಹಸ್ಯ

ತನಿಖೆಯಲ್ಲಿ, ಮಹೇಂದ್ರ ರೆಡ್ಡಿಯು Propofol ಎಂಬ ಅನಸ್ತೇಷಿಯಾ ಇಂಜೆಕ್ಷನ್ ಖರೀದಿಸಿದ್ದು ಬಯಲಾಗಿದೆ. ಈ ಔಷಧವನ್ನು ಬಳಸಿ ತನ್ನ ಪತ್ನಿಯನ್ನು ಕೊಲೆಗೈದಿರುವುದಾಗಿ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಮಾರತಹಳ್ಳಿ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡದಿಂದ ನಡೆದ ನಿರಂತರ ವಿಚಾರಣೆಯಲ್ಲಿ, ಮಹೇಂದ್ರ ತಾನು ಒಂದು ಮೆಡಿಕಲ್ ಸ್ಟೋರ್‌ಗೆ ತೆರಳಿ, ಸರ್ಜನ್ ಎಂದು ಸುಳ್ಳು ಹೇಳಿ, ತಾನೇ ಬರೆದ ಪ್ರಿಸ್ಕ್ರಿಪ್ಷನ್ ನೀಡಿ Propofol ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೆಡಿಕಲ್ ಸ್ಟೋರ್‌ನವರು ಈ ಔಷಧವನ್ನು ಎಲ್ಲರಿಗೂ ನೀಡಲಾಗದು ಎಂದಿದ್ದರೂ, ಮಹೇಂದ್ರ ತುರ್ತು ಚಿಕಿತ್ಸೆಗೆ ಬೇಕು ಎಂದು ಒತ್ತಾಯಿಸಿ ಖರೀದಿಸಿದ್ದ.

ಕೃತಿಕಾಳ ಕೊಠಡಿಯಲ್ಲಿ ಔಷಧಗಳು ಪತ್ತೆ

ತನಿಖೆಯಲ್ಲಿ ಕೃತಿಕಾರ ಕೊಠಡಿಯಿಂದ ಗ್ಯಾಸ್ಟ್ರಿಕ್ ಔಷಧಿಗಳು, ಗ್ಲೂಕೋಸ್ ಬಾಟಲ್‌ಗಳು ಸೇರಿದಂತೆ ರಾಶಿ ರಾಶಿ ಔಷಧಗಳು ಪತ್ತೆಯಾಗಿವೆ. ಮಹೇಂದ್ರ ಕೃತಿಕಾ ಅವರ ಕೊಠಡಿಯನ್ನು ಕ್ಲಿನಿಕ್‌ನಂತೆ ಪರಿವರ್ತಿಸಿದ್ದ. ಋತುಚಕ್ರದ ಸಮಯದಲ್ಲೂ ಡ್ರಿಪ್‌ ಹಾಕಿಕೊಳ್ಳಲು ಒತ್ತಾಯಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಇದರ ಜೊತೆಗೆ, ಕೃತಿಕಾ ಅವರ ಕೈಯಲ್ಲಿ ಕ್ಯಾನುವಲ್ ಚುಚ್ಚಿದ ಗಾಯದ ಗುರುತುಗಳು ಕಂಡುಬಂದಿವೆ.

ಎಷ್ಟೇ ವಿಚಾರಣೆ ನಡೆಸಿದರೂ, ಮಹೇಂದ್ರ ಕೊಲೆಗೆ ನಿಖರ ಕಾರಣವನ್ನು ಬಾಯಿಬಿಡದಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. “ನಾನು ಕೊಲೆ ಮಾಡಿಲ್ಲ” ಎಂದು ಮಾತಿಗೆ ಮಾತಿಗೆ ಹೇಳುವ ಆರೋಪಿಯಿಂದ ಸತ್ಯವನ್ನು ಕಿತ್ತಿಕೊಳ್ಳಲು ತನಿಖಾಧಿಕಾರಿಗಳು ಶತಪ್ರಯತ್ನ ನಡೆಸುತ್ತಿದ್ದಾರೆ. ಕಸ್ಟಡಿ ಅವಧಿಯಲ್ಲಿ ಇನ್ನೂ ಎರಡು ದಿನ ಬಾಕಿಯಿದ್ದು, ಈ ಸಮಯದೊಳಗೆ ಕೊಲೆಗೆ ಕಾರಣವನ್ನು ಬಾಯಿಬಿಡಿಸುವುದು ಪೊಲೀಸರ ಗುರಿಯಾಗಿದೆ.

ಪೊಲೀಸರು ತಾಂತ್ರಿಕ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. Propofol ಖರೀದಿಯ ದಾಖಲಾತಿಗಳು ಮತ್ತು ಮೆಡಿಕಲ್ ಸ್ಟೋರ್‌ನವರ ಹೇಳಿಕೆಯು ತನಿಖೆಗೆ ಆಧಾರವನ್ನು ಒದಗಿಸಿದೆ. ಈ ಸಾಕ್ಷ್ಯಗಳನ್ನು ಆಧರಿಸಿ, ಮಹೇಂದ್ರನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕೃತಿಕಾಳಿಗೆ Propofol ಓವರ್‌ಡೋಸ್‌ನಿಂದ ಕೋಮಾಕ್ಕೆ ಜಾರಿದ್ದು, ಯಾವುದೇ ಚಿಕಿತ್ಸೆ ನೀಡದ ಕಾರಣ ಆಕೆ ಸಾವನ್ನಪ್ಪಿದ್ದಾಳೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

Exit mobile version