ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಭೆ

Web Photo Editor (46)

ಬೆಂಗಳೂರು(ಜೂನ್ 26):ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಬಕಾರಿ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಸಿಎಂ ಅವರು ಅಧಿಕಾರಿಗಳಿಗೆ ಎಚ್ಚರಿಕೆಗಳನ್ನು ನೀಡಿದ್ದು, ಸರ್ಕಾರದ ಘನತೆ ಕಾಪಾಡುವಂತೆ ನಿರ್ದೇಶನ ನೀಡಿದರು.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಸಿಎಂ ಡಿ.ಕೆ.ಶಿವಕುಮಾರ್ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, “ನೀವುಗಳು ಘನತೆ ಉಳಿಸಿಕೊಂಡರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ” ಎಂದು ಎಚ್ಚರಿಸಿದರು. ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡೋದಕ್ಕೆ ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಅಗತ್ಯವಾದ ಕಾನೂನು ಬದಲಾವಣೆಯನ್ನೂ ತರಲು ಅವಕಾಶಗಳಿವೆ ಎಂದು ಅವರು ಸ್ಪಷ್ಟಪಡಿಸಿದರು.

ಇಲಾಖೆಯಲ್ಲಿ ಹೊಸದಾಗಿ AIB ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ ಎಂದು ಸಿಎಂ ತಿಳಿಸಿದರು. ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಅಕ್ಕಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ನಡೆಯುತ್ತಿದೆ ಎನ್ನುವ ವರದಿ ನೋಡಿದ್ದೇನೆ. ಇಲಾಖೆಗೆ ಕೊಟ್ಟಿರುವ ಗುರಿ ತಲುಪಲು ಶ್ರಮಿಸಬೇಕು. ನೀವುಗಳು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ ಎಂದು ಅವರು ಹೇಳಿದರು. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಸಿಎಂ ಎಚ್ಚರಿಸಿದರು.

ವಾಣಿಜ್ಯ ತೆರಿಗೆ ಇಲಾಖೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ

ವಿಧಾನಸೌಧದಲ್ಲಿ ನಡೆದ ವಾಣಿಜ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಸಿಎಂ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು. “ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ಕಾರದ ಶಕ್ತಿ. ನೀವು ಶಕ್ತಿ ಕೊಡದಿದ್ದರೆ ಸರ್ಕಾರ ನಡೆಸುವುದು ಕಷ್ಟ” ಎಂದು ಅವರು ಹೇಳಿದರು. ಹಣಕಾಸು ವರ್ಷಕ್ಕೆ ನೀಡಿರುವ ಗುರಿಯನ್ನು ಮೀರಿ ಸಾಧನೆ ತೋರಿಸುತ್ತೀರೆಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಯಾವುದೇ ಸರಕು ಸಾಗಣೆ ವಾಹನವು ಅಗತ್ಯ ದಾಖಲೆಗಳಿಲ್ಲದೆ ಚೆಕ್ ಪೋಸ್ಟ್ ಅಥವಾ ರಾಜ್ಯದ ಗಡಿಯನ್ನು ದಾಟಬಾರದು. ತೆರಿಗೆ ಸೋರಿಕೆಗೆ ಯಾವುದೇ ಅವಕಾಶ ಇರಬಾರದು. ಇದರಲ್ಲಿ ಯಾವುದೇ ರೀತಿಯ ರಾಜಿ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ರಾಜ್ಯದ ಎಲ್ಲ ವಲಯಗಳಿಂದಲೂ ನನಗೆ ನಿರಂತರ ಮಾಹಿತಿ ಬರುತ್ತದೆ. ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ, ಗಡಿ ಜಿಲ್ಲೆಗಳಿಂದ ರಾಜ್ಯದ ಎಲ್ಲ ಭಾಗಗಳಲ್ಲೂ ನನ್ನದೇ ಆದ ಸಂಪರ್ಕಗಳಿವೆ ಎಂದು ಸಿಎಂ ಹೇಳಿದರು. ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದರೂ ಅದು ತಮ್ಮ ಗಮನಕ್ಕೆ ಬರುತ್ತದೆ ಎಂದು ಎಚ್ಚರಿಸಿದರು.

ತಂತ್ರಜ್ಞಾನ ಬಳಕೆ ಮತ್ತು ತೆರಿಗೆ ಸೋರಿಕೆ ತಡೆ

ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸುವಂತೆ ಸಿಎಂ ಸೂಚಿಸಿದರು. ಮಾಹಿತಿ ಹಂಚಿಕೆ ಮತ್ತು ಜಂಟಿ ಕಾರ್ಯಾಚರಣೆಗಳ ಮೂಲಕ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕು. ಇಂದು ನಮ್ಮ ಬಳಿ ಸುಮಾರು 12 ಲಕ್ಷ ತೆರಿಗೆದಾರರ ಮಾಹಿತಿಯಿದೆ. ತಂತ್ರಜ್ಞಾನ ಮತ್ತು ಡೇಟಾ ಅನಾಲಿಟಿಕ್ಸ್ ಮೂಲಕ ಅವರನ್ನು 360 ಡಿಗ್ರಿ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ನಿಮಗಿದೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರೆ ನಿಮಗೆ ನೀಡಿರುವ ಗುರಿಯನ್ನು ಸಾಧಿಸುವುದಷ್ಟೇ ಅಲ್ಲ, ಅದನ್ನು ಮೀರಿಸುವ ಸಾಮರ್ಥ್ಯವೂ ನಿಮ್ಮಿಂದ ಸಾದ್ಯವಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಜನರು ಮುಖ್ಯಮಂತ್ರಿ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ, ಶಾಸಕ ಅಪ್ಪಾಜಿ ನಾಡಗೌಡ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಅವರ ಸೇವೆ ಅಗತ್ಯವಾಗಿದ್ದು, ಸಚಿವ ಸಂಪುಟದಲ್ಲಿ ಅವಕಾಶ ನೀಡುವಂತೆ ಜನರು ಒತ್ತಾಯಿಸಿದರು.

Exit mobile version