ಹಾಸನ: ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಪೋಷಕರು ತೆಗೆದುಕೊಂಡ ಮಾನವೀಯ ನಿರ್ಧಾರವೊಂದು ಇದೀಗ ಎಲ್ಲರ ಗಮನ ಸೆಳೆದಿದೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೂರು ತಿಂಗಳಿನಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತಮ್ಮ ಏಕೈಕ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದ ಚಂದ್ರೇಗೌಡ ಹಾಗೂ ಶಿವಮ್ಮ ದಂಪತಿಯ 31 ವರ್ಷದ ಪುತ್ರ ರವಿಕುಮಾರ್ ಮೃತಪಟ್ಟ ದುರ್ದೈವಿ. ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್, ರಜೆ ಹಿನ್ನೆಲೆ ಸ್ವಗ್ರಾಮಕ್ಕೆ ಬಂದಿದ್ದರು.
ಕಳೆದ ಜುಲೈ 6ರಂದು ಹೊಳೆನರಸೀಪುರ ತಾಲೂಕಿನ ಪರಸನಹಳ್ಳಿ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರವಿಕುಮಾರ್ ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಅಪಘಾತದ ಬಳಿಕ ಅವರನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡುತ್ತಿತ್ತು.
ಸುಮಾರು ಮೂರು ತಿಂಗಳ ಕಾಲ ವೈದ್ಯರು ರವಿಕುಮಾರ್ ಅವರ ಆರೋಗ್ಯ ಸುಧಾರಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಂತಿಮವಾಗಿ ಅವರು ಮೆದುಳು ನಿಷ್ಕ್ರಿಯಗೊಂಡ ಸ್ಥಿತಿ (ಬ್ರೈನ್ ಡೆಡ್) ತಲುಪಿರುವುದಾಗಿ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿದರು.
ಆದರೆ, ಈ ದುಃಖದ ನಡುವೆಯೂ ಚಂದ್ರೇಗೌಡ ಮತ್ತು ಶಿವಮ್ಮ ದಂಪತಿ ತೆಗೆದುಕೊಂಡ ನಿರ್ಧಾರ ಅನೇಕರಿಗೆ ಮಾದರಿಯಾಗಿದೆ. ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡಲು ಅವರು ಒಪ್ಪಿಗೆ ನೀಡಿದರು. ಮಗ ತಮ್ಮೊಂದಿಗೆ ಇಲ್ಲದಿದ್ದರೂ, ಆತನ ಅಂಗಾಂಗಗಳ ಮೂಲಕ ಹಲವು ಮಂದಿಯ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಬಹುದು ಎಂಬ ಮಾನವೀಯ ಚಿಂತನೆಯೊಂದಿಗೆ ಪೋಷಕರು ಈ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ದಾನ ವ್ಯವಸ್ಥೆಯಾದ ‘ಜೀವಸಾರ್ಥಕತೆ’ ಮೂಲಕ ರವಿಕುಮಾರ್ ಅವರ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸೂಕ್ತ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಹೊಸ ಜೀವನ ನೀಡಲು ಈ ದಾನ ನೆರವಾಗಲಿದೆ.
ರವಿಕುಮಾರ್ ಅಪಘಾತಕ್ಕೀಡಾಗುವ ಮುನ್ನ ಆರೋಗ್ಯವಂತ ಯುವಕರಾಗಿದ್ದು, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವೃತ್ತಿ ಜೀವನದಲ್ಲಿ ಮುಂದುವರಿಯುತ್ತಿದ್ದರು. ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷವೆಂದರೆ, ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ತದ್ರೂಪಿಯಂತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಈ ಕಾರಣದಿಂದಲೂ ಅವರು ಗ್ರಾಮದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು.
