ಇಂದಿನ ಯುವಪೀಳಿಗೆ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಆಧುನಿಕ ತಂತ್ರಜ್ಞಾನಗಳನ್ನ ಆವಿಷ್ಕಾರಿಸುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಮುಖ್ಯ ವೈಜ್ಞಾನಿಕ ಅಧಿಕಾರಿ ಹಾಗೂ ಜಿರೋವೇಸ್ಟ್ ಮ್ಯಾನೇಜ್ಮೆಂಟ್ ಸೊಸೈಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರಾದ ಡಾ ಬಾಲಗಂಗಾಧರ್ ಹೇಳಿದರು.
ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿರುವ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಕೆಐ ವಾಸು ಆಡಿಟೋರಿಯಂ ನಲ್ಲಿ ಜೀರೋ ವೇಸ್ಟ್ ಸೊಸೈಟಿ ಆಫ್ ಇಂಡಿಯಾ (ZWSI) ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸ್, ಬೆಂಗಳೂರು ಜಂಟಿಯಾಗಿ ನಾಗರಬಾವಿ ಮತ್ತು ಉಲ್ಲಾಳದ ಆಕ್ಸ್ಫರ್ಡ್ ಇನ್‌ಸ್ಟಿಟ್ಯೂಷನ್ಸ್, ಬಿಎನ್ಎಂ ಫ್ರೆಂಡ್ಸ್ ಆಫ್ ನೇಚರ್ ಕ್ಲಬ್ ಮತ್ತು ಬಿಎನ್ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ ʼಗ್ರೀನೋವೇಟ್ – 2025ʼ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಅಧಿಕಾರಿಯಾಗಿದ್ದಾಗ ಅನೇಕ ಕಾರ್ಖಾನೆಗಳಿಗೆ ಭೇಟಿ ಕೊಡುತ್ತಿದ್ದೆ. ಅವರೆಲ್ಲಾ ತಮ್ಮ ಉತ್ಪನ್ನಗಳನ್ನ ತಯಾರಿಸುವುದಕ್ಕೆ ಕೊಟ್ಟ ಮಹತ್ವವನ್ನ ಅದರಿಂದ ಉತ್ಪನ್ನವಾಗುವ ತ್ಯಾಜ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ. ಈ ಕುರಿತು ಪ್ರಶ್ನಿಸಿದಾಗ ತ್ಯಾಜ್ಯ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನವೇ ಲಭ್ಯವಿಲ್ಲ ಎಂಬ ಅಸಹಾಯಕತೆ ವ್ಯಕ್ತವಾಗುತ್ತಿತ್ತು. ಹೀಗಾಗಿ ಆ ನಿಟ್ಟಿನಲ್ಲಿ ಹೊಸ, ಹೊಸ ತಂತ್ರಜ್ಞಾನಗಳನ್ನ ಪರಿಚಯಿಸುವ ಹೊಣೆಗಾರಿಕೆ ಇಂದಿನ ಪೀಳಿಗೆಯ ಮೇಲಿದೆ. ಇದಕ್ಕಾಗಿ ಇಂದು ಸರ್ಕಾರ ಹಾಗೂ ಅನೇಕೆ ಕಾರ್ಪೊರೇಟ್ ಕಂಪನಿಗಳ ಸಿಎಸ್ ಆರ್ ನಿಧಿ ಕೂಡಾ ನೆರವಾಗಲಿವೆ ಎಂದರು.
ಜನರ ಅಭ್ಯಾಸ ಬದಲಾದ್ರೆ ಸ್ವಚ್ಛತೆಯನ್ನ ಕಾಪಾಡುವುದು ಸವಾಲಿನ ಕೆಲಸವಲ್ಲ. ಸಾರ್ವಜನಿಕರ ಕಾಳಜಿಯಿಂದಾಗಿಯೇ ಇಂದೋರ್ ನಗರಕ್ಕೆ ಸತತವಾಗಿ ಕ್ಲೀನ್ ಸಿಟಿ ಎಂಬ ಪ್ರಶಸ್ತಿ ದೊರೆಯುತ್ತಿದೆ. ಅದು ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನ ಹೊಂದಿದೆ ಎಂಬುದನ್ನ ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ಪ್ರಾಯೋಗಿಕ ಕಲಿಕೆ ಇದ್ದಾಗ ಮಾತ್ರ ಆವಿಷ್ಕಾರಗಳು ಹೆಚ್ಚಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ ಇವತ್ತಿನ ಶಿಕ್ಷಣದ ಪಠ್ಯ ಕೂಡಾ ಬದಲಾಗಬೇಕಿದೆ. ಯುವ ಮನಸುಗಳನ್ನ ಇಗ್ನೈಟ್ ಮಾಡುವ ಕೆಲಸವಾಗಬೇಕಿದೆ. ಆ ಕಾರ್ಯ ಕೈಗೊಳ್ಳಲೆಂದೆ ಜಿರೋ ವೇಸ್ಟ್ ಸೊಸೈಟಿ ಆಫ್ ಇಂಡಿಯಾ ಹುಟ್ಟಿಕೊಂಡಿದ್ದು ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿರೋ ವೇಸ್ಟ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ಬಿ ಆರ್ ಸುಪ್ರೀತ್ ಮಾತನಾಡಿ, ಇಂದು ಭಾರತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನ ಹೊಂದಿದೆ. ಯುವಶಕ್ತಿ ಮನಸು ಮಾಡಿದರೆ ಯಾವುದು ಅಸಾಧ್ಯವಲ್ಲ. ಬೆಂಗಳೂರು ಸ್ಟಾರ್ಟ್ ಅಪ್ ಹಬ್ ಆಗಿ ಬದಲಾಗಿದೆ. ಈಗ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಇಲ್ಲಿಯೇ ಇದ್ದಾರೆ. ಯಾಕೆಂದರೆ ಎಲ್ಲರಿಗೂ ಇಂದು ನೂತನ ತಂತ್ರಜ್ಞಾನದ ಅಗತ್ಯವಿದೆ.
ತಂತ್ರಜ್ಞಾನಗಳು ವ್ಯವಸ್ಥೆಯನ್ನು ಸದೃಢಗೊಳಿಸುತ್ತವೆ. ಈ ಕಾರಣಕ್ಕೆ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಮಾರ್ಗದರ್ಶಕರನ್ನ ಅರಸುತ್ತಿವೆ. ಎಲ್ಲರಿಗೂ ಏನನ್ನಾದರು ಹೊಸದನ್ನ ಆರಂಭಿಸಬೇಕಿದೆ. ಆದರೆ ಅವರನ್ನ ಕೈಹಿಡಿದು ನಡೆಸುವುದಕ್ಕೆ ಮಾರ್ಗದರ್ಶಕರ, ಸಂಶೋಧನಾ ಸಂಸ್ಥೆಗಳ ಕೊರತೆಯಿದೆ. ಆ ಕೆಲಸವನ್ನ ಜಿರೋವೇಸ್ಟ್ ಸೊಸೈಟಿ ನಿರ್ವಹಿಸಲಿದೆ. 2025ರಲ್ಲಿ ನಾವು ಹಲವು ಸ್ಟಾರ್ಟ್ ಅಪ್ ಕಂಪನಿಗಳಿಗೆ ನೆರವಾಗಲು ನಿರ್ಧರಿಸಿದ್ದೇವೆ, ಎಂದರು.
ಮುಂದಿನ ದಿನಗಳಲ್ಲಿ ಜಿರೋವೇಸ್ಟ್ ಸೊಸೈಟಿಗೆ ಅನೇಕ ಸ್ವಯಂಸೇವಕರ ಅಗತ್ಯವಿದೆ. ಸೊಸೈಟಿಯು ಹಲವು ಜಿರೋ ವೇಸ್ಟ್ ಪ್ರಾಡಕ್ಟ್‌ಗಳನ್ನ ಪರಿಚಯಿಸುವ ಉದ್ದೇಶಹೊಂದಿದೆ. ನಾವೆಲ್ಲಾ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ತಿಳಿಸಿದರು.
ಜಿರೋ ವೇಸ್ಟ್ ಸೊಸೈಟಿಯ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಾ ಪ್ರತಿಭಾ ಮಾತನಾಡಿ ಜಿರೋ ವೇಸ್ಟ್ ಸೊಸೈಟಿ ಆಫ್ ಇಂಡಿಯಾದ ಉದ್ದೇಶ ತಿಳಿಸಿಕೊಟ್ಟರು. ಪರಿಸರ ಜವಾಬ್ದಾರಿ ಹಾಗೂ ನೂತನ ಆವಿಷ್ಕಾರಗಳು ಮತ್ತು ಸುಸ್ಥಿರ ಬದಲಾವಣೆಯ ನಿಟ್ಟಿನಲ್ಲಿ ಕಾರ್ಯತತ್ಪರವಾಗಿರುವ ಸಂಸ್ಥೆಯಾಗಿದೆ. ನಾನಾ ರೂಪಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಜಿರೋ ವೇಸ್ಟ್ ಸಾಧಿಸುವ ಗುರಿ ಹೊಂದುವುದು ನಮ್ಮ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿರೋ ವೇಸ್ಟ್ ಸೊಸೈಟಿ ಆಫ್ ಇಂಡಿಯಾದ ಸಹ ಸಂಚಾಲಕಿ ಡಾ ಹೆಲೆನ್ ರೊಸೆಲಿನ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂಶೂನ್ಯ ತ್ಯಾಜ್ಯ ಸಾಧಿಸುವ ನಿಟ್ಟಿನಲ್ಲಿ ಆವಿಷ್ಕಾರಗೊಳಿಸಿರುವ ವಿನೂತನ ತಂತ್ರಜ್ಞಾನಗಳನ್ನ ಪ್ರಸ್ತುತಪಡಿಸಲು ಆಗಮಿಸಿದ್ದ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.