ಹಾಸನ/ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನಿವಾಸದಲ್ಲಿ ವಿಶೇಷ ಸಂಕಲ್ಪ ಪೂಜೆ ನೆರವೇರಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಪುರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಾಲಯದ ಉತ್ಸವಮೂರ್ತಿಯನ್ನು ನಿನ್ನೆ ರಾತ್ರಿ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಕರೆಸಿಕೊಂಡು ಬಂದು ಕುಟುಂಬ ಸಮೇತರೊಂದಿಗೆ ಪೂಜೆ ಸಲ್ಲಿಸಿದರು.
ಅರ್ಚಕ ಯತೀಶ್ ನೇತೃತ್ವದ ತಂಡವು ಅಡ್ಡಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನು ಬಸ್‌ನಲ್ಲಿ ಸುರಕ್ಷಿತವಾಗಿ ಬೆಂಗಳೂರಿಗೆ ತಂದಿತು. ಇಂದು ಬೆಳಗ್ಗೆಯೇ ಮೂರ್ತಿಯನ್ನು ಮತ್ತೆ ದೇವಾಲಯಕ್ಕೆ ವಾಪಸ್ ತರಲಾಗಿದೆ. ಈ ವಿಶೇಷ ಪೂಜೆಯಲ್ಲಿ ಡಿ.ಕೆ.ಶಿ ಅವರ ಕುಟುಂಬದವರು, ಹತ್ತಿರದ ಸ್ನೇಹಿತರು ಭಾಗವಹಿಸಿದ್ದರು.
ಜುಲೈನಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದ ಡಿಕೆಶಿ
ಜುಲೈ 26ರಂದು ಡಿ.ಕೆ. ಶಿವಕುಮಾರ್ ಅವರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ್ದರು. ಆಗಲೇ ಉತ್ಸವಮೂರ್ತಿಯನ್ನು ಬೆಂಗಳೂರಿಗೆ ಕರೆದೊಯ್ದು ಸಂಕಲ್ಪ ಪೂಜೆ ಮಾಡಲು ದೇವಾಲಯದ ಅಜ್ಜಯ್ಯರಲ್ಲಿ ಅನುಮತಿ ಕೋರಿದ್ದರು. ಅಜ್ಜಯ್ಯರು ಒಪ್ಪಿಗೆ ನೀಡಿದ್ದರು. ಆದರೆ ರಾಜಕೀಯ ಚಟುವಟಿಕೆಗಳ ಕಾರಣದಿಂದ ವಿಳಂಬವಾಗಿ ಈಗ ಪೂಜೆ ನಡೆದಿದೆ.
ಅರ್ಚಕ ಯತೀಶ್ ಮಾಧ್ಯಮಗಳಿಗೆ ತಿಳಿಸಿದಂತೆ, ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಭಕ್ತರ ಬೇಡಿಕೆಯನ್ನು ಈಡೇರಿಸುವ ದೇವರು. ಡಿಸಿಎಂ ಅವರು ಜುಲೈನಲ್ಲಿ ಬಂದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದ್ದರು. ಆ ಇಷ್ಟಾರ್ಥ ಈಡೇರಿದೆ ಅಥವಾ ಈಡೇರುವ ಸಮಯ ಬಂದಿದೆ ಎಂಬ ನಂಬಿಕೆಯಿಂದ ಸಂಕಲ್ಪ ಪೂಜೆ ಮಾಡಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗಳು ತಾರಕಕ್ಕೇರಿರುವಾಗ ಡಿ.ಕೆ.ಶಿ ಅವರ ಈ ಪೂಜೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿ ಅವರೇ ಮುಂದಿನ ಸಿಎಂ ಆಗಬೇಕು ಎಂಬ ಬೇಡಿಕೆ ಜೋರಾಗಿದೆ. ಇದೇ ಸಂದರ್ಭದಲ್ಲಿ ಜೇನುಕಲ್ಲು ಸ್ವಾಮಿ ಬಳಿ ಸಂಕಲ್ಪ ಪೂಜೆ ಮಾಡಿರುವುದು “ಇಷ್ಟಾರ್ಥ ಸಿದ್ಧಿ”ಗೆ ಸಂಕೇತವೇ ? ಎಂಬ ಚರ್ಚೆ ಕೂಡ ಶುರುವಾಗಿದೆ.
ಡಿ.ಕೆ.ಶಿ ಅವರು ಈ ಹಿಂದೆಯೂ ಹಲವು ಬಾರಿ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ರಾಜಕೀಯ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದ್ದರು. ಆದರೆ ಉತ್ಸವಮೂರ್ತಿಯನ್ನು ಮನೆಗೆ ಕರೆಸಿಕೊಂಡು ಬಂದು ಸಂಕಲ್ಪ ಪೂಜೆ ಮಾಡಿರುವುದು ಅಪರೂಪದ ಘಟನೆಯಾಗಿದೆ. ದೇವಾಲಯದ ಅಜ್ಜಯ್ಯರು, ಡಿಸಿಎಂ ಅವರ ಭಕ್ತಿ ಮತ್ತು ನಂಬಿಕೆಗೆ ದೇವರು ಖಂಡಿತ ಉತ್ತರ ನೀಡುತ್ತಾನೆ ಎಂದು ಹರಸಿದ್ದಾರೆ. ಡಿ.ಕೆ.ಶಿ ಅವರ ಈ ಪೂಜೆ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ತರಲಿದೆಯೇ ? ಎಂಬುದನ್ನ ಕಾದು ನೋಡಬೇಕಿದೆ.





