ಬೆಂಗಳೂರು, ಜೂನ್ 24: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿಯಾಗಿ ಶಿವಮೊಗ್ಗದಲ್ಲಿ ಉಚ್ಚ ನ್ಯಾಯಾಲಯದ ಸರ್ಕ್ಯೂಟ್ ಸಂಚಾರ ಪೀಠ ಸ್ಥಾಪಿಸುವ ಬಗ್ಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಬಾರ್ ಕೌನ್ಸಿಲ್ ಪದಾಧಿಕಾರಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾದ ಅವರು, ಶಿವಮೊಗ್ಗ ಜಿಲ್ಲೆಗೆ ಹೈಕೋರ್ಟ್ ಸರ್ಕ್ಯೂಟ್ ಪೀಠ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಪೀಠ ಸ್ಥಾಪನೆಯಾಗುವವರೆಗೂ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲಿ ಮುಂದುವರೆಸುವಂತೆ ಕೋರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ಎಂಎಲ್ಸಿಗಳಾದ ಧನರಾಜ್ ಸರ್ಜಿ, ಅರುಣ್ ಶಂಕರ್ ಮೂರ್ತಿ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಬಸಪ್ಪ ಗೌಡ ಉಪಸ್ಥಿತರಿದ್ದರು.
ಸಂಸದ ರಾಘವೇಂದ್ರ ಹೇಳಿಕೆ
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ”ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಿವಮೊಗ್ಗ ಜಿಲ್ಲೆಯ ಬಾರ್ ಅಸೋಸಿಯೇಷನ್ ವತಿಯಿಂದ ಅಭಿನಂದನೆ ಸಲ್ಲಿಸಿದ್ದೇವೆ. ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪಿಸುವಂತೆ ಸೀನಿಯರ್ ಬಾರ್ ಅಸೋಸಿಯೇಷನ್ ಮೂಲಕ ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಅನೇಕ ಕಡೆ ಸರ್ಕ್ಯೂಟ್ ಪೀಠ ಸ್ಥಾಪನೆಯಾಗಿದ್ದು, ಶಿವಮೊಗ್ಗ ಜಿಲ್ಲೆಗೂ ಈ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
ಈ ಹಿಂದೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದನ್ನು ಅವರು ನೆನಪಿಸಿಕೊಂಡರು. ಜೊತೆಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇದೇ ವಿಷಯವಾಗಿ ಮನವಿ ಮಾಡಲಾಗಿತ್ತು ಎಂದು ಹೇಳಿದರು. ಎಲ್ಲಾ ಹಂತಗಳಲ್ಲಿ ಈ ವಿಷಯವನ್ನು ಮುಂದುವರಿಸಲಾಗುತ್ತಿದೆ ಎಂದರು.
ಕೇಂದ್ರದಲ್ಲಿ ಸಚಿವ ಸಂಪುಟ ಮರುಜೋಡಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ”ನಾನು ಸಚಿವಾಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾಲ್ಕನೇ ಬಾರಿ ಸಂಸದನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷವು ಯಾವಾಗ, ಯಾವುದನ್ನು ನಿರ್ಧರಿಸುತ್ತದೆಯೋ ಅದಕ್ಕೆ ಕಾದು ನೋಡೋಣ” ಎಂದರು.
ಇದೇ ಸಂದರ್ಭದಲ್ಲಿ ಬಿಡದಿ ಹಾಗೂ ದೇವನಹಳ್ಳಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕರಣಗಳ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಹಾಗೂ ಸ್ಥಳೀಯ ಸಂಸದರು ಈಗಾಗಲೇ ಹೋರಾಟ ನಡೆಸುತ್ತಿದ್ದಾರೆ. ಅವರು ಈ ಸಮಸ್ಯೆಗೆ ಸೂಕ್ತ ಗಮನ ಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
