ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಶನಿವಾರ (ಮೇ 30) ನಡೆಯಿತು. ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರನ್ನು ಒಮ್ಮತದಿಂದ ಸಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡಲಾಯಿತು. ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ಸಭೆಯ ವಿವರ
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾವನೆಗೆ ಸಭೆಯಲ್ಲಿದ್ದ ಎಲ್ಲಾ ಶಾಸಕರು ಏಕಮತದಿಂದ ಒಪ್ಪಿಗೆ ಸೂಚಿಸಿದರು. ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ನಿರ್ಣಯ ಮತ್ತು ಅನುಮೋದನೆ
ಡಿ.ಕೆ.ಶಿವಕುಮಾರ್ ಅವರ ಆಯ್ಕೆಗೆ ಸಿದ್ದರಾಮಯ್ಯ ಅವರು ನಿರ್ಣಯ ಮಂಡಿಸಿದರು. ಈ ನಿರ್ಣಯಕ್ಕೆ ಡಾ.ಜಿ.ಪರಮೇಶ್ವರ್ ಅವರು ತಕ್ಷಣ ಅನುಮೋದನೆ ನೀಡಿದರು. ಇದರೊಂದಿಗೆ ಡಿಕೆಶಿ ಅವರ ನೇಮಕ ಅಧಿಕೃತವಾಯಿತು. ಕೇವಲ ಐದೇ ನಿಮಿಷಗಳಲ್ಲಿ ಸಭೆ ಮುಕ್ತಾಯಗೊಂಡಿತು.
ಹಕ್ಕು ಮಂಡನೆಗೆ ರೆಡಿ
ಸಭೆ ಮುಗಿದ ಕೂಡಲೇ ಡಿ.ಕೆ.ಶಿವಕುಮಾರ್ ಅವರು ಲೋಕಭವನಕ್ಕೆ ತೆರಳಿದ್ದಾರೆ. ಅಲ್ಲಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರ ಸಹಿ ಮತ್ತು ಬೆಂಬಲ ಪಡೆದ ಡಿಕೆಶಿ ಅವರು ಸರ್ಕಾರ ರಚನೆಗೆ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಲಿದ್ದಾರೆ.
ಪ್ರಮಾಣವಚನ ದಿನಾಂಕ
ಜೂನ್ 3ರಂದು ಡಿಕೆಶಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಕ್ಷದಿಂದ ಈಗಾಗಲೇ ಅಧಿಕೃತ ಘೋಷಣೆ ಮಾಡಲಾಗಿದೆ. ಲೋಕಭವನದ ಗಾಜಿನ ಮನೆಯಲ್ಲಿ ಡಿಕೆಶಿ ಅವರ ಪದಗ್ರಹಣ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಸಭೆಯಲ್ಲಿ ಪಾಲ್ಗೊಂಡ ಪ್ರಮುಖ ಶಾಸಕರು
ಹೆಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಟಿ.ಬಿ. ಜಯಚಂದ್ರ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಅಲ್ಲಮ ಪ್ರಭು ಪಾಟೀಲ್, ಎಂ.ಸಿ.ಸುಧಾಕರ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಜಮೀರ್ ಅಹಮದ್, ಮಹಾಂತೇಶ್ ಕೌಜಲಗಿ, ಹ್ಯಾರಿಸ್, ಹೆಚ್.ಸಿ. ಬಾಲಕೃಷ್ಣ, ಇಟ್ಬಾಲ್ ಹುಸೇನ್, ಸಿ.ಪಿ. ಯೋಗೇಶ್ವರ್, ಆನೇಕಲ್ ಶಿವಣ್ಣ, ನಾರಾ ಭರತ್ ರೆಡ್ಡಿ, ಸುಬ್ಬಾರೆಡ್ಡಿ, ಕೆ.ಜೆ. ಜಾರ್ಜ್, ಚಲುವರಾಯಸ್ವಾಮಿ, ರಾಘವೇಂದ್ರ ಹಿಟ್ನಾಳ್, ಬಿ.ನಾಗೇಂದ್ರ, ಶರಣ ಬಸಪ್ಪ ದರ್ಶನಾಪುರ, ಬಸನಗೌಡ ದದ್ದಲ್, ಲಕ್ಷ್ಮಣ್ ಸವದಿ, ಕುಣಿಗಲ್ ರಂಗನಾಥ್, ಪ್ರದೀಪ್ ಈಶ್ವರ್.
ಪರಿಷತ್ ಸದಸ್ಯರು ಮತ್ತು ಮಹಿಳಾ ಶಾಸಕಿಯರು
ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಯತೀಂದ್ರ ಸಿದ್ದರಾಮಯ್ಯ, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ರೂಪಾ ಶಶಿಧರ್, ಲತಾ ಮಲ್ಲಿಕಾರ್ಜುನ್, ನಯನ ಮೋಟಮ್ಮ ಸೇರಿದಂತೆ ಬಹುತೇಕ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಗೈರಾದ ಶಾಸಕ
ಶಾಸಕ ಕೆ.ಎನ್.ರಾಜಣ್ಣ ಅವರು ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿದ್ದರು. ಅವರನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದು, ಡಿಕೆಶಿ ಅವರ ನೇಮಕಕ್ಕೆ ಒಮ್ಮತ ನೀಡಿದರು.
