ಬೆಂಗಳೂರು, ಜುಲೈ 24: ಇತ್ತೀಚೆಗೆ ನಿಧನರಾದ ತಮ್ಮ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರಿಗೆ ರಾಜ್ಯದ ಜನತೆ ತೋರಿದ ಅಪಾರ ಪ್ರೀತಿ, ಗೌರವ ಮತ್ತು ಅಭಿಮಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾವುಕ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ದುಃಖದ ಕ್ಷಣದಲ್ಲಿ ಜೊತೆಯಾಗಿ ನಿಂತ ಪ್ರತಿಯೊಬ್ಬರಿಗೂ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.
ಜುಲೈ 18ರಂದು ಚೆನ್ನಮ್ಮ ಅವರು ಅನಾರೋಗ್ಯದ ಕಾರಣದಿಂದ ನಿಧನರಾದ ಬಳಿಕ ಕುಟುಂಬದೊಂದಿಗೆ ದುಃಖ ಹಂಚಿಕೊಂಡ ರಾಜ್ಯದ ಜನತೆ, ರಾಜಕೀಯ ಮುಖಂಡರು, ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅಭಿಮಾನಿಗಳಿಗೆ ದೇವೇಗೌಡರು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. “ನನ್ನ ಬಾಳಿನ ನಂದಾದೀಪ ನಂದಿಹೋದ ಈ ಕಠಿಣ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ನೀಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
72 ವರ್ಷಗಳ ಸುದೀರ್ಘಕಾಲ ನನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ನನ್ನ ಸಹಧರ್ಮಿಣಿ ಶ್ರೀಮತಿ ಚೆನ್ನಮ್ಮ ಅವರು 2026 ಜುಲೈ 18ರಂದು ಶನಿವಾರ ಶಿವೈಕ್ಯರಾದರು. ಮನೆಯ ನಂದಾದೀಪ ನಂದಿಹೋದ ಕಷ್ಟಕರ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.🙏 pic.twitter.com/9FygY1ewtA
— H D Devegowda (@H_D_Devegowda) July 24, 2026
ತಮ್ಮ ದಾಂಪತ್ಯ ಜೀವನವನ್ನು ನೆನಪಿಸಿಕೊಂಡ ದೇವೇಗೌಡರು, ಹಿರಿಯರ ಆಶೀರ್ವಾದದೊಂದಿಗೆ ಆರಂಭವಾದ 72 ವರ್ಷಗಳ ದಾಂಪತ್ಯ ಪಯಣದಲ್ಲಿ ಚೆನ್ನಮ್ಮ ಅವರು ಸುಖ-ದುಃಖಗಳಲ್ಲಿ ಸಮಾನ ಪಾಲುದಾರರಾಗಿದ್ದರು ಎಂದು ಹೇಳಿದ್ದಾರೆ. ಶಾಸಕ, ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ತಮ್ಮ ರಾಜಕೀಯ ಬದುಕಿನಲ್ಲಿ ತಮಗೆ ದೊರೆತ ಯಶಸ್ಸಿನ ಹಿಂದೆ ಚೆನ್ನಮ್ಮ ಅವರ ತ್ಯಾಗ, ಮಮತೆ ಮತ್ತು ಬೆಂಬಲವೇ ಪ್ರಮುಖ ಶಕ್ತಿಯಾಗಿತ್ತು ಎಂದು ಭಾವುಕರಾಗಿ ತಮ್ಮ ಮಡದಿಯನ್ನು ಸ್ಮರಿಸಿದ್ದಾರೆ.
“ಗಂಧದ ಮರ ತನ್ನನ್ನು ತಾನು ತೇಯ್ದುಕೊಂಡು ಪರಿಮಳ ನೀಡುವಂತೆ, ಚೆನ್ನಮ್ಮ ಅವರ ತ್ಯಾಗ ಮತ್ತು ಮಮತೆ ನನ್ನ ಬದುಕಿಗೆ ಪರಿಪೂರ್ಣತೆ ನೀಡಿತು” ಎಂದು ಅವರು ಬರೆದಿದ್ದಾರೆ. ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದ ಸೊಸೆಯಾಗಿ ಬಂದ ಅವರು, ದೈವಭಕ್ತಿ, ಸರಳತೆ ಮತ್ತು ಮಾನವೀಯ ಮೌಲ್ಯಗಳಿಂದ ಮನೆಯನ್ನೇ ನಂದಗೋಕುಲವನ್ನಾಗಿ ರೂಪಿಸಿದ್ದರು ಎಂದು ನೆನೆದಿದ್ದಾರೆ.
ಮಾಜಿ ಪ್ರಧಾನಿಯ ಪತ್ನಿಯಾಗಿದ್ದರೂ ಬದುಕಿನ ಕೊನೆಯ ಕ್ಷಣದವರೆಗೂ ಅತ್ಯಂತ ಸರಳ ಜೀವನ ನಡೆಸಿದ ಚೆನ್ನಮ್ಮ ಅವರು ಸಂಬಂಧಗಳಿಗೆ ಅಪಾರ ಮಹತ್ವ ನೀಡುತ್ತಿದ್ದರು. ಅವರ ವ್ಯಕ್ತಿತ್ವ, ಕರುಣೆ ಮತ್ತು ವಾತ್ಸಲ್ಯ ರಾಜಕೀಯದ ಪ್ರಭಾವಕ್ಕೆ ಒಳಗಾಗಲಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಮುಖ್ಯಮಂತ್ರಿ, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಅಂತಿಮ ನಮನ ಸಲ್ಲಿಸಿದ ಪ್ರತಿಯೊಬ್ಬರಿಗೂ ದೇವೇಗೌಡರು ವಿನಮ್ರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶೇಷವಾಗಿ ತಮ್ಮ ತವರು ಜಿಲ್ಲೆ ಹಾಸನದ ಜನತೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಭಾವುಕರಾದ ಅವರು, “ನನ್ನ ಕುಟುಂಬದೊಂದಿಗೆ ನಿಂತು ಧೈರ್ಯ ತುಂಬಿದ ಪ್ರತಿಯೊಬ್ಬರಿಗೂ ನಾನು ಸದಾ ಋಣಿಯಾಗಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
