ಬೆಂಗಳೂರು: ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಭವ್ಯವಾಗಿ ಆಚರಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಮಧ್ಯರಾತ್ರಿ 12 ಗಂಟೆಯಿಂದಲೇ ಹುಟ್ಟುಹಬ್ಬದ ಸಂಭ್ರಮ ಆರಂಭವಾಗಿತ್ತು. ಅಭಿಮಾನಿಗಳು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಡಿ.ಕೆ.ಶಿ ಅವರಿಗೆ ಹೂಗುಚ್ಛಗಳನ್ನು ನೀಡಿ, ಹಾರ ಹಾಕಿ ಸಂಭ್ರಮಿಸಿದರು.
ಮಾಜಿ ಸಚಿವ ಎಂ.ಎಸ್. ನಲಪಾಡ್, ಕಾಂಗ್ರೆಸ್ ನಾಯಕರು, ಶಾಸಕರು, ಮತ್ತು ಸಾವಿರಾರು ಕಾರ್ಯಕರ್ತರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದರು. ಅಭಿಮಾನಿಗಳು “ಡಿ.ಕೆ.ಶಿ ಜಿಂದಾಬಾದ್”, “ಕರ್ನಾಟಕದ ರಕ್ಷಕ ಡಿ.ಕೆ.ಶಿ” ಎಂಬ ಘೋಷಣೆಗಳೊಂದಿಗೆ ಸಂಭ್ರಮಿಸಿದರು.
ಜೊತೆಗೆ ಅಭಿಮಾನಿಗಳ ಜೊತೆ ಸೇರಿ ಕೇಕ್ ಅನ್ನು ಕತ್ತರಿಸುವ ಮೂಲಕ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡರು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡರು.
ಡಿ.ಕೆ. ಶಿವಕುಮಾರ್ ಅವರು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, “ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನಗೆ ಶಕ್ತಿ. ರಾಜ್ಯದ ಅಭಿವೃದ್ಧಿಗಾಗಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
ಇದೇ ವೇಳೆ ವಿವಿಧ ಮಠಗಳ ಶ್ರೀಗಳು ಹಾಗೂ ಪುರೋಹಿತರು ಡಿಸಿಎಂ ನಿವಾಸಕ್ಕೆ ಭೇಟಿ ನೀಡಿ, ಮನ್ಯುಸೂಕ್ತ ಮಂತ್ರಗಳ ಪಠಣದೊಂದಿಗೆ ಅವರಿಗೆ ಆಯುಷ್ಯ, ಆರೋಗ್ಯ ಮತ್ತು ಅಧಿಕಾರ ಪ್ರಾಪ್ತಿಯಾಗಲೆಂದು ಹರಸಿದರು. ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ಸಂಭ್ರಮಾಚರಣೆಯ ನಂತರ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಹುಟ್ಟುಹಬ್ಬದ ಸಂದರ್ಭದಲ್ಲಿ ಡಿ.ಕೆ.ಶಿ ಅವರ ನಿವಾಸದ ಸುತ್ತಮುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬೆಳಗ್ಗೆಯಿಂದಲೂ ಸಂಭ್ರಮಾಚರಣೆ ಮುಂದುವರೆಯುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್ನಲ್ಲಿ ಪ್ರಬಲ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವು ಪಕ್ಷದ ಕಾರ್ಯಕರ್ತರಲ್ಲಿ ತುಂಬು ಉತ್ಸಾಹವನ್ನು ಸೃಷ್ಟಿಸಿದೆ.