ದೀಪಾವಳಿಗೆ ಊರಿಗೆ ಹೋಗುವವರಿಗೆ ಗುಡ್‌ನ್ಯೂಸ್..ಕೆಎಸ್‌ಆರ್‌ಟಿಸಿ 2500 ವಿಶೇಷ ಬಸ್‌ ವ್ಯವಸ್ಥೆ

Untitled design (51)

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಊರಿಗೆ ತೆರಳುವ ಪ್ರಯಾಣಿಕರ ಸೌಕರ್ಯಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವತಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 17ರಿಂದ 20ರವರೆಗೆ ರಾಜ್ಯದ ವಿವಿಧ ಭಾಗಗಳಿಗೆ 2,500 ಹೆಚ್ಚುವರಿ ಬಸ್‌ಗಳನ್ನು ಸಂಚಾರಕ್ಕೆ ಬಿಡುಗಡೆ ಮಾಡಲು ನಿಗಮ ಸಜ್ಜಾಗಿದೆ.

ಹಬ್ಬದ ಕಾಲದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬರುವುದರಿಂದ ಸಾಮಾನ್ಯ ಸಾರಿಗೆ, ಐರಾವತ, ಸ್ವೀಪರ್ ಕೋಚ್‌ಗಳಂತಹ ಎಲ್ಲ ತರದ ಬಸ್‌ಗಳ ಸೇವೆ ಹೆಚ್ಚುವರಿ ಲಭ್ಯವಾಗಲಿದೆ. ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಸಮಯೋಚಿತ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ KSRTC ಈ ಕ್ರಮ ಕೈಗೊಂಡಿದೆ.

ಬೆಂಗಳೂರಿನಿಂದ ಎಲ್ಲೆಡೆ ಬಸ್‌ಗಳ ಸಂಚಾರ

ಹಬ್ಬದ ಪ್ರಯಾಣದ ಮುಖ್ಯ ಕೇಂದ್ರಗಳಾದ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಹಾಗೂ ಪೀಣ್ಯಾ ಬಸ್ ನಿಲ್ದಾಣಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳತ್ತ ಬಸ್‌ಗಳು ಸಂಚರಿಸಲಿವೆ. ಮೆಜೆಸ್ಟಿಕ್‌ನಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ವಿಜಯಪುರ, ಯಾದಗಿರಿ ಸೇರಿ ಉತ್ತರ ಕರ್ನಾಟಕದ ಎಲ್ಲೆಡೆ ಪ್ರಯಾಣಿಸಲು ಸೌಲಭ್ಯ ಕಲ್ಪಿಸಲಾಗಿದೆ.

ಇದೆ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೂ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ಮೈಸೂರು ಹಾಗೂ ದಕ್ಷಿಣ ಭಾಗಗಳಿಗೂ ಹೆಚ್ಚುವರಿ ಸೇವೆ

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು ಭಾಗದ ಪ್ರಯಾಣಿಕರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ, ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವಿರಾಜಪೇಟೆ, ಪಿರಿಯಾಪಟ್ಟಣ ಸೇರಿದಂತೆ ಮೈಸೂರಿನ ಸುತ್ತಮುತ್ತಲಿನ ಎಲ್ಲ ಪ್ರಮುಖ ಸ್ಥಳಗಳಿಗೆ ಬಸ್‌ಗಳು ನಿರಂತರವಾಗಿ ಸಂಚರಿಸಲಿವೆ.

ಶಾಂತಿನಗರ ಬಸ್ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಬಸ್‌ಗಳ ಸಂಚಾರ ಹೆಚ್ಚಿಸಲಾಗಿದೆ. ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್ ಹಾಗೂ ಕ್ಯಾಲಿಕಟ್‌ವರೆಗೆ ಬಸ್‌ಗಳ ಸೌಲಭ್ಯ ದೊರೆಯಲಿದೆ.

ಮುಂಗಡ ಟಿಕೆಟ್‌ಗಳಿಗೆ ರಿಯಾಯಿತಿ ಆಫರ್

ಪ್ರಯಾಣಿಕರ ಸಹಕಾರಕ್ಕಾಗಿ KSRTC ವಿಶೇಷ ರಿಯಾಯಿತಿ ಘೋಷಿಸಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಎರಡೂ ಬದಿಯ (to and fro) ಟಿಕೆಟ್ ಬುಕ್ ಮಾಡಿದವರಿಗೆ ಶೇ. 10ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಈ ಮೂಲಕ ಹಬ್ಬದ ಪ್ರಯಾಣವನ್ನು ಕಡಿಮೆ ವೆಚ್ಚದಲ್ಲಿ, ಸುಲಭವಾಗಿ ಯೋಜಿಸಬಹುದು.

ಟಿಕೆಟ್‌ಗಳನ್ನು KSRTC ಅಧಿಕೃತ ವೆಬ್‌ಸೈಟ್, ಮೊಬೈಲ್ ಆಪ್ ಅಥವಾ ಹತ್ತಿರದ ಬಸ್ ನಿಲ್ದಾಣದ ಕೌಂಟರ್‌ನಲ್ಲಿ ಬುಕ್ ಮಾಡಬಹುದು.

ಅಕ್ಟೋಬರ್ 22 ಮತ್ತು 26ರಂದು ಊರುಗಳಿಂದ ಬೆಂಗಳೂರಿಗೆ ವಾಪಸ್ಸಾಗುವ ಪ್ರಯಾಣಿಕರಿಗೂ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಹಬ್ಬದ ಬಳಿಕ ನಗರಕ್ಕೆ ಮರಳುವವರಿಗೆ ಯಾವುದೇ ತೊಂದರೆ ಉಂಟಾಗದಂತೆ ನಿಗಮ ಕ್ರಮ ಕೈಗೊಂಡಿದೆ.

ಪ್ರಯಾಣದ ವೇಳಾಪಟ್ಟಿ, ಬಸ್‌ಗಳ ಲಭ್ಯತೆ ಹಾಗೂ ರಿಯಾಯಿತಿ ವಿವರಗಳಿಗಾಗಿ KSRTC ಅಧಿಕೃತ ವೆಬ್‌ಸೈಟ್ ಮತ್ತು ಮೊಬೈಲ್ ಆಪ್‌ನಲ್ಲಿ ಮಾಹಿತಿ ಲಭ್ಯವಿದೆ.

Exit mobile version