ಬೆಂಗಳೂರು: ದೀಪಾವಳಿಯ ಸಂಭ್ರಮದ ನಡುವೆ ಬೆಂಗಳೂರಿನಲ್ಲಿ ದುರಂತವೊಂದು ಸಂಭವಿಸಿದೆ. ಪಟಾಕಿ ಸಿಡಿತದಿಂದ ಐವರು ಮಕ್ಕಳು ಸೇರಿದಂತೆ 14 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರು ಪಟಾಕಿ ಸಿಡಿಸುವವರಾಗಿದ್ದರೆ, ಇನ್ನು ಕೆಲವರು ಕೇವಲ ರಸ್ತೆಯಲ್ಲಿ ಹಾದುಹೋಗುತ್ತಿದ್ದವರು ಅಥವಾ ದೂರದಿಂದ ನೋಡುತ್ತಿದ್ದವರಾಗಿದ್ದಾರೆ.
ಒಂದು ಘಟನೆಯಲ್ಲಿ, ಮೂರು ವರ್ಷದ ಬಾಲಕನ ಕಣ್ಣಿಗೆ ಪಟಾಕಿಯ ಕಿಡಿಗಳು ಸಿಡಿದು ಗಾಯವಾಗಿದೆ. ಈ ಬಾಲಕನಿಗೆ ನಾರಾಯಣ ನೇತ್ರಾಲಯದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಈಗ ಆತನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, 12 ವರ್ಷದ ಬಾಲಕಿಯ ಕಾರ್ನಿಯಾಕ್ಕೆ ಪಟಾಕಿಯ ಕಿಡಿಗಳಿಂದ ಹಾನಿಯಾಗಿದೆ. ಆಕೆಯ ಕಣ್ಣಿನಿಂದ ಪಟಾಕಿಯ ಕಣಗಳನ್ನು ತೆಗೆದು ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
ಸೋಮವಾರ ಮಧ್ಯಾಹ್ನದ ವೇಳೆಗೆ, 11 ವರ್ಷದ ಬಾಲಕ ಪಟಾಕಿ ಸಿಡಿಸುವಾಗ ತೀವ್ರ ಗಾಯಗೊಂಡಿದ್ದಾನೆ. ಪಟಾಕಿಯ ಕಿಡಿಗಳು ಆತನ ಕಣ್ಣಿಗೆ ತಾಗಿದ್ದರಿಂದ ಗಂಭೀರ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಂಟೋ ಆಸ್ಪತ್ರೆಯ ವೈದ್ಯರು, ಈ ಬಾಲಕ ಸೇರಿದಂತೆ ಒಟ್ಟು ನಾಲ್ವರಿಗೆ ಚಿಕಿತ್ಸೆ ನೀಡಿದ್ದಾರೆ. ಇವರಲ್ಲಿ ಮೂವರನ್ನು ಚಿಕಿತ್ಸೆಯ ಬಳಿಕ ಮನೆಗೆ ಕಳುಹಿಸಲಾಗಿದ್ದು, ಒಬ್ಬರಿಗೆ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಕೂಡ ಐವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ, ಇವರೆಲ್ಲರೂ ಪಟಾಕಿಯಿಂದ ಗಾಯಗೊಂಡವರೇ ಆಗಿದ್ದಾರೆ.
