ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ : 50 ಕ್ಕೂ ಹೆಚ್ಚು ಮಂದಿ ಪೊಲೀಸ್‌ ವಶಕ್ಕೆ

Untitled design 2025 12 01T121548.643

ಧಾರವಾಡ: ಧಾರವಾಡದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಮಾಡಲಾಯಿತು.. ನಗರದ ಶ್ರೀನಗರ ಸರ್ಕಲ್‌ನಲ್ಲಿ ನಡೆದಿದ್ದ ಈ ರ‍್ಯಾಲಿಯಲ್ಲಿ 50 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ಗಂಭೀರವಾಗುತ್ತಿರುವ ನಡುವೆ, ಜನ ಸಾಮಾನ್ಯರ ವೇದಿಕೆ ಎಂಬ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಈ ಜಾಥಾ ಕುರಿತಂತೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ನೀಡಲಾಗಿರಲಿಲ್ಲ. ಪೊಲೀಸರ ಈ ನಿರಾಕರಣೆಯ ನಡುವೆಯೂ ಸಂಘಟನೆ ಪ್ರತಿಭಟನೆ ಮುಂದುವರಿಸಿದ ಪರಿಣಾಮ ಪರಿಸ್ಥಿತಿ ತೀವ್ರಗೊಂಡಿತ್ತು.

ಅನುಮತಿ ಇಲ್ಲದೇ ರ‍್ಯಾಲಿ 

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಪ್ರತಿಭಟನೆ ನಡೆಸುವುದನ್ನು ತಿಳಿಸದೇ ರ‍್ಯಾಲಿ ನಡೆಸುವುದು ಕಾನೂನುಬಾಹಿರ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದರು. ಆದರೂ ಪ್ರತಿಭಟನೆ ಆರಂಭವಾದದ್ದರಿಂದ ಪೊಲೀಸರು ಸ್ಥಳಕ್ಕೆ ಧಾವಿಸಿ ನಿಯಂತ್ರಣಕ್ಕೆ ಮುಂದಾದರು.

ಶ್ರೀನಗರ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳು ಸರ್ಕಾರದ ನೇಮಕಾತಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಯುವಕರು “ನಮಗೆ ಉದ್ಯೋಗ ಬೇಕು”, “ಭರ್ತಿಗೆ ದಿನಾಂಕ ಘೋಷಿಸಿ”, “ವರ್ಷಗಳಿಂದ ಹುದ್ದೆಗಳು ಖಾಲಿ ಇವೆ” ಎಂಬ ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಸರ ಹೊರಹಾಕಿದರು.

“ನಮ್ಮ ಧ್ವನಿಯನ್ನು ಸರ್ಕಾರದವರಿಗೆ ತಲುಪಿಸಲು ನಾವು ಶಾಂತಿಯುತ ರ‍್ಯಾಲಿ ನಡೆಸುತ್ತಿದ್ದೇವೆ. ಹಕ್ಕುಬೋಧನೆಯನ್ನೂ ತಡೆಯುವುದು ಸರಿಯಲ್ಲ” ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದರು.

ಇನ್ನೊಂದೆಡೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ತಮ್ಮ ಕರ್ತವ್ಯ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅನುಮತಿ ಇಲ್ಲದೇ ದೊಡ್ಡ ಗುಂಪಿನ ರ‍್ಯಾಲಿ ನಡೆಸುವುದು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟುಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪೋಲೀಸರ ಮಧ್ಯಪ್ರವೇಶದ ನಂತರ ಸ್ಥಳದಲ್ಲಿ ಕೆಲವು ಹೊತ್ತಿನ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪ್ರತಿಭಟನಾನಿರತರನ್ನು ಬಸ್‌ಗಳಲ್ಲಿ ಕೂರಿಸಿ ಠಾಣೆಗೆ ಸಾಗಿಸಿದರು. ಈ ವೇಳೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಪರಿಶೀಲಿಸಿ, ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಿಳಿಯಲು, ಸರಿಯಾದ ಮಾರ್ಗದಲ್ಲಿ ತಿಳಿಸಬೇಕು,” ಎಂದು ಅವರು ತಿಳಿಸಿದರು.

Exit mobile version