ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್ಪಿ ಸಿದ್ಧಾರ್ಥ್ ಗೋಯಲ್ ಸ್ಪೋಟಕ ಮಾಹಿತಿ

BeFunky collage 2026 02 20T082111.135

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದಲ್ಲಿ ನಡೆದ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ ಘಟನೆ ನಡೆದಿದ್ದು, ಇದರಿಂದ ಸುಮಾರು ನಾಲ್ಕರಿಂದ ಐದು ಜನರಿಗೆ ಗಾಯಗಳಾಗಿವೆ. ಹಳೇ ನಗರದ ಪಂಕಾ ಮಸೀದಿ ಬಳಿ ಮೆರವಣಿಗೆ ಹಾದು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯ ನಂತರ ತರಕಾರಿ ಮಾರುಕಟ್ಟೆಯ ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಿದ ಆರೋಪವೂ ಇದೆ. ಈ ಘಟನೆಯಿಂದ ನಗರದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂ ಪರ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ತೂರಾಟದಲ್ಲಿ ಐವರಿಗೆ ಗಾಯ :

ಮೆರವಣಿಗೆಯ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಐವರಿಗೆ ಗಾಯಗಳಾಗಿವೆ. ಎಸ್ಪಿ ಸಿದ್ಧಾರ್ಥ್ ಗೋಯಲ್ ಸೇರಿದಂತೆ ಹಿಂದೂ ಪರ ಕಾರ್ಯಕರ್ತರಿಗೂ ಗಾಯವಾಗಿದೆ ಎಂದು ವರದಿಯಾಗಿದೆ. ಮಸೀದಿಯಲ್ಲಿ ಸೇರಿದ್ದ ಯುವಕರ ಗುಂಪು ಕಲ್ಲು ಎಸೆದಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಡಿಜೆ ಆಪರೇಟರ್‌ಗಳ ಮೇಲೂ ಕಲ್ಲು ಎಸೆಯಲಾಗಿದೆ. ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಕಿಲ್ಲಾ ಓಣಿ ಮತ್ತು ಪಂಕಾ ಮಸೀದಿ ಸುತ್ತಮುತ್ತಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಎಸ್ಪಿ ಸಿದ್ಧಾರ್ಥ್ ಗೋಯಲ್‌ರ ಸ್ಪೋಟಕ ಹೇಳಿಕೆ :

ಘಟನೆಯ ವೇಳೆ ಸ್ಥಳದಲ್ಲೇ ಇದ್ದ ಎಸ್ಪಿ ಸಿದ್ಧಾರ್ಥ್ ಗೋಯಲ್ ಮಾಹಿತಿ ನೀಡಿದ್ದಾರೆ: “ಮೆರವಣಿಗೆ ಸ್ವಲ್ಪ ದೂರದಲ್ಲಿದ್ದಾಗ ಎರಡು ಕಲ್ಲುಗಳು ಬಂದು ಬಿದ್ದವು. ಯಾವ ಕಡೆಯಿಂದ ಬಂದವು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ. ನನಗೂ ಕಲ್ಲು ಬಿದ್ದಿದೆ, ಇಬ್ಬರು ಪೊಲೀಸರಿಗೂ ಗಾಯವಾಗಿದೆ. ಯಾರಿಗೂ ಮೇಜರ್ ಇಂಜ್ಯೂರಿ ಆಗಿಲ್ಲ. ಚಪ್ಪಲಿ ಎಸೆದ ಬಗ್ಗೆಯೂ ವಿಡಿಯೋ ಪರಿಶೀಲನೆ ನಡೆಸುತ್ತಿದ್ದೇವೆ. ರಾತ್ರಿ 9:30ರಿಂದ 10ರ ನಡುವೆ ಘಟನೆ ಸಂಭವಿಸಿದೆ. ಪ್ರಕರಣ ದಾಖಲಾಗಿದ್ದು, ವಿಡಿಯೋ ಚೆಕ್ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.” ಎಂದು ತಿಳಿಸಿದ್ದಾರೆ.

ಹಿಂದೂ ಪರ ಕಾರ್ಯಕರ್ತರ ಆಕ್ರೋಶ ಮತ್ತು ಮುಂದಿನ ಕ್ರಮ :

ಕಿಡಿಗೇಡಿಗಳ ಬಂಧನಕ್ಕೆ ಹಿಂದೂ ಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಎಸ್ಪಿ ಹಾಗೂ ಉತ್ತರ ವಲಯ ಐಜಿಪಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಹಿಂದೂ ಪರ ಮುಖಂಡರು ಸಭೆ ನಡೆಸಲಿದ್ದಾರೆ. ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಶಾಂತಿ ಕಾಪಾಡಿಕೊಂಡು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

Exit mobile version