ಬೇಕರಿ ಬಂದ್ ಬಿಸಿ: ಗುರುವಾರದಿಂದ ಟೀ-ಕಾಫಿಗೂ ಬ್ರೇಕ್?

Untitled design (18)

ಬೆಂಗಳೂರಿನಲ್ಲಿ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜೂನ್ 18ರ ಗುರುವಾರ ಬೆಳಗ್ಗೆ 5 ಗಂಟೆಯಿಂದ ನಗರಾದ್ಯಂತ ಬಹುತೇಕ ಬೇಕರಿಗಳು, ಕಾಂಡಿಮೆಂಟ್ಸ್ ಹಾಗೂ ಸಣ್ಣ ವ್ಯಾಪಾರ ಮಳಿಗೆಗಳು ಬಂದ್ ಆಗುವ ಸಾಧ್ಯತೆ ಇದೆ.

ಈ ಮುಷ್ಕರದಿಂದ ಬೆಂಗಳೂರಿನ ಜನರಿಗೆ ತೊಂದರೆಯಾಗುವುದಂತು ಖಂಡಿತ. ಪ್ರತಿದಿನ ಬೆಳಗ್ಗೆ ಟೀ, ಕಾಫಿ, ಹಾಲು, ಬ್ರೆಡ್, ಬನ್ ಸೇರಿದಂತೆ ಬೇಕರಿ ಉತ್ಪನ್ನಗಳಿಗಾಗಿ ಸಾವಿರಾರು ಜನರು ಅವಲಂಬಿಸಿರುವ ಅಂಗಡಿಗಳು ಮುಚ್ಚಿದರೆ ಸಾಮಾನ್ಯ ಜನರಿಗೆ ತೊಂದರೆ ಎದುರಾಗಬಹುದು.

ವ್ಯಾಪಾರಿಗಳ ಪ್ರಕಾರ, ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಸಣ್ಣ ವ್ಯಾಪಾರಿಗಳು ಹಾಗೂ ಬೇಕರಿ ಮಾಲೀಕರಿಂದ ಹಣಕ್ಕಾಗಿ ಹಫ್ತಾ ವಸೂಲಿ ಮಾಡಲಾಗುತ್ತಿದೆ. ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೆಲವು ವ್ಯಾಪಾರಿಗಳು, ರೌಡಿಗಳಿಂದ ಮಾತ್ರವಲ್ಲದೆ, ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಂದಲೂ ಅನಗತ್ಯ ಕಿರುಕುಳ ಎದುರಾಗುತ್ತಿದೆ ಎಂದು ದೂರಿದ್ದಾರೆ. ವಿಶೇಷವಾಗಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ.

ಬೇಕರಿ ಮಾಲೀಕರ ಪ್ರಮುಖ ಬೇಡಿಕೆಗಳಲ್ಲಿ ಮೊದಲನೆಯದು ಹಫ್ತಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು. ಸಣ್ಣ ವ್ಯಾಪಾರಿಗಳಿಗೆ ಭದ್ರತೆ ಒದಗಿಸಿ, ಭಯವಿಲ್ಲದೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದರ ಜೊತೆಗೆ ತಂಬಾಕು ಉತ್ಪನ್ನಗಳ ಮಾರಾಟದ ನಿಯಮಗಳ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬೇಡಿಕೆಯೂ ಇದೆ. ಅಧಿಕಾರಿಗಳು ಯಾವುದೇ ಮುನ್ನೋಟವಿಲ್ಲದೆ ವಸ್ತುಗಳನ್ನು ಸೀಜ್ ಮಾಡುವುದರಿಂದ ವ್ಯಾಪಾರಿಗಳಿಗೆ ಆರ್ಥಿಕ ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಮುಷ್ಕರ ಅನಿರ್ದಿಷ್ಟಾವಧಿಯದ್ದಾಗಿರುವುದರಿಂದ, ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಲಕ್ಷಾಂತರ ಜನರ ದಿನಚರಿಯಲ್ಲಿ ಬೇಕರಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಈ ಮುಷ್ಕರ ನಗರದ ಸಾಮಾನ್ಯ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Exit mobile version