ಧರ್ಮಸ್ಥಳ ಕೇಸ್: ಯೂಟ್ಯೂಬರ್‌ಗಳ ಮೇಲೆ ಎಸ್ಐಟಿ ತನಿಖೆ

Untitled design 2025 10 03t120221.621

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸಮಾಧಿ ಆರೋಪಗಳ ತನಿಖೆಯಲ್ಲಿ, ಆರೋಪಗಳ ಕುರಿತು ವೀಡಿಯೊಗಳನ್ನು ತಯಾರಿಸಿದ ಹಲವಾರು ಯೂಟ್ಯೂಬರ್‌ಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗುರಿಯಾಗಿರಿಸಿಕೊಂಡಿದೆ. ತನಿಖೆಯ ಭಾಗವಾಗಿ ಯೂಟ್ಯೂಬರ್‌ಗಳ ವಿಚಾರಣೆ, ಹಲ್ಲೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿತ್ತು. 

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಗಾಗಿದ್ದ ಯುಟ್ಯೂಬರ್‌ಗಳಾದ ಸಮೀರ್‌, ಅಭಿಷೇಕ್ ಹಾಗೂ ಕೇರಳದ ಯೂಟ್ಯೂಬರ್ ಮನಾಫ್ ಅವರ ವಿಚಾರಣೆಯನ್ನು ಎಸ್ಐಟಿ ತಂಡ ಪೂರ್ಣಗೊಳಿಸಿದೆ. ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತೆಗೆಯುವ ವಿಡಿಯೋವನ್ನು ಮಾಡಿದ ಆರೋಪದಲ್ಲಿ ಅಭಿಷೇಕ್ ಅವರ ಮೊಬೈಲ್ ಫೋನ್ ಅನ್ನು ಎಸ್ಐಟಿ ವಶಪಡಿಸಿಕೊಂಡಿದೆ. ಮನಾಫ್ ಅವರು ತಮ್ಮ ವಿಚಾರಣೆ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ .

ಬುಧವಾರ ಸಂಜೆ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ವಿಡಿಯೋ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಒಂದು ಗುಂಪು ಹಲ್ಲೆ ನಡೆಸಿತ್ತು. ಈ ಘಟನೆಯ ನಂತರ ಸುದ್ದಿ ಮಾಡಲು ಹೋದ ಖಾಸಗಿ ಮಾಧ್ಯಮದ ವರದಿಗಾರ ಮತ್ತು ಕ್ಯಾಮೆರಾಮೆನ್ ಮೇಲೂ ಹಲ್ಲೆ ನಡೆಯಿತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ .

ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಅವರು, ಧರ್ಮಸ್ಥಳ ವಿರುದ್ಧ ವೀಡಿಯೊಗಳನ್ನು ತಯಾರಿಸುವಂತೆ ತಮ್ಮ ಸ್ನೇಹಿತ ಯುನೈಟೆಡ್ ಮೀಡಿಯಾ ಅಭಿಷೇಕ್ ಆಫರ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಸುಮಂತ್ ಅವರ ಪ್ರಕಾರ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ನಮ್ಮ ಬಾಸ್. ಎಲ್ಲಾ ಅವರು ನೋಡಿ ಕೊಳ್ತಾರೆ ಎಂದು ಅಭಿಷೇಕ್ ಅವರು ತಿಳಿಸಿದ್ದರು. ಸುಮಂತ್ ಅವರು ಈ ಷಡ್ಯಂತ್ರದ ಬಗ್ಗೆ ಎಸ್ಐಟಿ ವಿಚಾರಣೆಗೆ ಸಾಕ್ಷ್ಯ ನೀಡಲು ಸಿದ್ಧರಾಗಿದ್ದಾರೆ .

ಧರ್ಮಸ್ಥಳ ಪ್ರಕರಣದ ಹಿಂದೆ ಕಮ್ಯೂನಿಸ್ಟ್ ಹಾಗೂ ಕೇರಳ ಸರ್ಕಾರದ ಕೈವಾಡವಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿಯು ಯಾವುದೇ ಸಾಕ್ಷಿಗಳನ್ನು ನೀಡಿಲ್ಲ .

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ದಕ್ಷಿಣ ಕನ್ನಡ ಜಿಲ್ಲೆಯ ಡಿಜಿಟಲ್ ಮಾಧ್ಯಮವೊಂದರ ವಿರುದ್ಧ ನಗರದ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ . ಆದಾಗ್ಯೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಮಧ್ಯಂತರ ಅರ್ಜಿಯನ್ನು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಸೂಚಿಸಿದೆ .

Exit mobile version